ಕೆಂಗೇರಿ ಉಪನಗರದ ಬಸ್ ನಿಲ್ದಾಣ ಜನವರಿಯಲ್ಲಿ ಲೋಕಾರ್ಪಣೆ:

ಬೆಂಗಳೂರು: ಕೆಂಗೇರಿ ಉಪನಗರದ ಬಸ್ ನಿಲ್ದಾಣವನ್ನು ಜನವರಿ ತಿಂಗಳಲ್ಲಿ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹೇಳಿದರು.

ಶಾಸಕ ಎಸ್.ಟಿ. ಸೋಮಶೇಖರ್ ಅವರ ಕೋರಿಕೆ ಮೇರೆಗೆ ಕೆಂಗೇರಿ ಉಪನಗರದಲ್ಲಿರುವ ಬಸ್ ನಿಲ್ದಾಣದಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆ ಮತ್ತು ಅಧಿಕಾರಿಗಳೂಂದಿಗೆ ಚರ್ಚೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಳೆದ ಬಾರಿ ಸಾರಿಗೆ ಸಚಿವರಾಗಿದ್ದ ಸಂದರ್ಭದಲ್ಲಿ ಕೆಂಗೇರಿ ಉಪನಗರದ ಬಸ್ ನಿಲ್ದಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಲಾಗಿತ್ತು. ಕೋವಿಡ್ ಹಿನ್ನಲೆಯಲ್ಲಿ ಈ ಬಸ್ ನಿಲ್ದಾಣವನ್ನು ಲೋಕಾರ್ಪಣೆ ಮಾಡಲು ಸಾಧ್ಯವಾಗಿರಲಿಲ್ಲ. ಜನವರಿ ತಿಂಗಳ ಅಂತ್ಯದ ವೇಳೆಗೆ ಬಸ್ ನಿಲ್ದಾಣ ನಿಲ್ದಾಣವನ್ನು ಲೋಕಾರ್ಪಣೆ ಗೊಳಿಸಲಾಗುವುದು ಎಂದು ಹೇಳಿದರು.

ಬಸ್ ನಿಲ್ದಾಣದಲ್ಲಿರುವ ಖಾಲಿ ಮಳಿಗೆಗಳನ್ನು ಅತಿ ಶೀಘ್ರವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಸಾರ್ವಜನಿಕರು ಹಾಗೂ ಕ್ಷೇತ್ರದ ಶಾಸಕರಾದ ಎಸ್‌.ಟಿ.ಸೋಮಶೇಖರ್ ಅವರು ಹೆಚ್ಚುವರಿ ಬಸ್ ಗಳನ್ನು ಓಡಿಸಲು ಸಚಿವರಲ್ಲಿ ಮನವಿ ಮಾಡಿದರು.

ನಂತರ ಮಾತನಾಡಿದ ಶಾಸಕ ಎಸ್. ಟಿ. ಸೋಮಶೇಖರ್ ಅವರು, ಕೆಂಗೇರಿ ಉಪನಗರದ ನಾಗರೀಕರ ಬಹುದಿನಗಳ ಬೇಡಿಕೆಯಾದ ಬಸ್ ನಿಲ್ದಾಣ ಲೋಕಾರ್ಪಣೆ, ಮಳಿಗೆಗಳ ಹಂಚುವಿಕೆ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತರಲಾಗಿದೆ. ಸಾರ್ವಜನಿಕರ ಹಾಗೂ ನಮ್ಮ ಮನವಿಗೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಿದರು.

ಸಂಚಾರ ದಟ್ಟಣೆ ಇರುವ ನಿಲ್ದಾಣವನ್ನು ಹೊಸ ಬಸ್ ನಿಲ್ದಾಣಕ್ಕೆ ಸ್ಥಳಾಂತರ ಮಾಡುವುದು, ಬಸ್ ನಿಲ್ದಾಣದ ಬಳಿ ಇರುವ ಮರಗಳ ಸ್ಥಳಾಂತರ, ವಿದ್ಯುತ್ ಕಂಬಗಳ ಬದಲಾವಣೆ ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಿ ಇನ್ನು ಮೂರು ತಿಂಗಳ ಒಳಗಾಗಿ ಸಾರ್ವಜನಿಕರಿಗೆ ಮುಕ್ತಗೊಳಿಸಲು ಸಾರಿಗೆ ಸಚಿವರು ಅಧಿಕಾರಿಗಳಿಗೆ ಅದೇಶ ನೀಡಿದರು.

ಈ ಸಂದರ್ಭದಲ್ಲಿ ಬಿಎಂಟಿಸಿ ಎಂ.ಡಿ.ಸತ್ಯವತಿ ವಿಭಾಗೀಯ ಸಂಚಾರ ನಿರ್ವಹಣಾ ಅಧಿಕಾರಿಗಳು, ಡಿಪೋ ಮ್ಯಾನೇಜರ್ ಸೇರಿದಂತೆ ಬಿಎಂಟಿಸಿ ಅಧಿಕಾರಿಗಳು ಉಪಸ್ಥಿತರಿದ್ದರು.

Related posts