ಬಿಎಸ್’ವೈ ಭವಿಷ್ಯ; ಸಿಎಂ ಬದಲಾವಣೆ ಸನ್ನಿಹಿತವೆ?

ಬೆಂಗಳೂರು: ಬಿಜೆಪಿ ಹೈಕಮಾಂಡ್’ನಿಂದ ಸಿಎಂ ಯಡಿಯೂರಪ್ಪ ಅವರಿಗೆ ಬುಲಾವ್.. ಬಿಜೆಪಿಯಲ್ಲಿನ ಈ ದಿಢೀರ್ ವಿದ್ಯಮಾನ ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಕೆರಳುವಂತೆ ಮಾಡಿದೆ.

ರಾಜ್ಯ ಸರ್ಕಾರದ ಸಂಪುಟ ಸಚಿವರ ಬೇಗುದಿ, ರಾಜ್ಯ ಬಿಜೆಪಿ ನಾಯಕರ ನಡುವಿನ ಶೀತಲ ಸಮರದ ನಡುವೆ ನಾಯಕತ್ವ ಬದಲಾವಣೆ ಸಾಧ್ಯತೆಯ ಮಾತುಗಳು ಕೆಲವು ದಿನಗಳಿಂದ ಹೆಚ್ಚಾಗಿ ಚರ್ಚೆಗೆ ಬರುತ್ತಿವೆ. ಅದರಲ್ಲೂ ಡಿನೋಟಿಫಿಕೇಷನ್ ಅಕ್ರಮ ಕುರಿತಂತೆ ಹೈಕೋರ್ಟ್ ನೀಡಿರುವ ಆದೇಶಗಳು ಬಿಜೆಪಿ ಹೈಕಮಾಂಡ್’ಗೆ ಸಹಾಯವಾಗಿಯೇ ಮುಜುಗರವನ್ನುಂಟು ಮಾಡಿದೆ ಎನ್ನಲಾಗುತ್ತಿದೆ.

ಈ ಸಂದರ್ಭದಲ್ಲೇ ಸಿಎಂ ಯಡಿಯೂರಪ್ಪ ಅವರನ್ನು ಪಕ್ಷದ ರಾಷ್ಟ್ರೀಯ ವರಿಷ್ಠರು ದೆಹಲಿಗೆ ಕರೆಸಿಕೊಂಡು ರಾಜ್ಯ ರಾಜಕೀಯ ವಿದ್ಯಮಾನಗಳಿಗೆ ರೋಚಕತೆ ತುಂಬಿದ್ದಾರೆ.

ಸಿಎಂ ಬದಲಾವಣೆ ಸನ್ನಿಹಿತವೆ?

ಬಿಜೆಪಿ ಪಾಳಯದಲ್ಲಿ ಯಾವಾಗ ಏನು ಬೇಕಾದರೂ ನಡೆಯಬಹುದು ಎಂಬ ಮಾತಿದೆ. ಅದರಲ್ಲೂ ರಾಜ್ಯ ರಾಜಕೀಯದ ಸ್ಥಿತಿ ಗಮನಿಸಿದರೆ ಸದ್ಯವೇ ಕುತೂಹಲಕಾರಿ ಬೆಳವಣಿಗೆ ಸನ್ನಿಹಿತ ಎಂಬ ವಿಶ್ಲೇಷಣೆ ಸಾಗಿದೆ. ಅಧಿಕಾರ ಹೊಂದಿದವರ ಏಜ್ ಫ್ಯಾಕ್ಟರ್, ಭ್ರಷ್ಟಾಚಾರ ಆರೋಪದಿಂದಾಗಬಹುದಾದ ಡ್ಯಾಮೇಜ್’ಗೆ ಕಂಟ್ರೋಲ್, ಮೂಲ ಬಿಜೆಪಿಯವರ ಅಸಮಾಧಾನ ತಣಿಸುವ ಅನಿವಾರ್ಯತೆ ಮೊದಲಾದ ವಿಚಾರಗಳಿಂದಾಗಿ ಬಿಜೆಪಿ ರಾಷ್ಟ್ರೀಯ ವರಿಷ್ಠರು ಸಿಎಂ ಬದಲಾವಣೆಯ ತೀರ್ಮಾನವನ್ನು ಸಾಧ್ಯವೇ ಕೈಗೊಳ್ಳಬಹುದೆಂಬ ಮಾತುಗಳು ಆರೆಸ್ಸೆಸ್ ಪಾಳಯದಲ್ಲಿ ಕೇಳಿಬರುತ್ತಿದೆ.

ಆತುರ ಬೇಡ; ಮುತ್ಸದ್ದಿಗಳ ಸಲಹೆ?

ಹಿಂದಿನ ಚುನಾವಣೆಗಳಲ್ಲಿ ಆತುರದ ನಿರ್ಧಾರಗಳಿಂದಾಗಿ ಬಿಜೆಪಿಗೆ ಕಹಿ ಅನುಭವಾಗು ಆಗಿರುವುದರಿಂದ ಈ ಬಾರಿ ಅಂತಹಾ ಕಹಿ ಸತ್ಯಗಳಿಗೆ ಮತ್ತೊಮ್ಮೆ ಸಾಕ್ಷಿಯಾಗುವುದು ಬೇಡ ಎಂದು ಬಿಜೆಪಿ ಪಡಸಾಲೆಯ ಹಿರಿ ತಲೆಗಳು ಸಲಹೆ ಮಾಡಿವೆ. ಒಂದೊಮ್ಮೆ ಏಜ್ ಫಾಕ್ಟರ್ ಅಥವಾ ಇನ್ಯಾವುದೇ ನೆಪಗಳನ್ನು ಮುಂದಿಟ್ಟು ಮುಖ್ಯಮಂತ್ರಿ ಬದಲಾವಣೆಗೆ ಮುಂದಾದಲ್ಲಿ ಸಧ್ಯವೇ ನಡೆಯಲಿರುವ ಲೋಕಸಭಾ ಮತ್ತು ವಿಧಾನಸಭಾ ಉಪಚುನಾವಣೆಗಳಲ್ಲಿ ಬಿಜೆಪಿಗೆ ಹಿನ್ನಡೆಯುಂಟಾಗಬಹುದೆಂಬುದು ಹಲವರ ಎಚ್ಚರಿಕೆಯ ಮಾತುಗಳು. ಒಂದು ವೇಳೆ ಈ ಉಪಚುನಾವಣೆಯಲ್ಲಿ ಹೀನಾಯ ಸೋಲುಂಡರೂ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಅಧಿಕಾರವನ್ನು ಕಳೆದುಕೊಳ್ಳದು. ಆದರೆ ಕೃಷಿ ಕಾಯ್ದೆ, ಲವ್ ಜಿಹಾದಿ ನಿಷೇಧ, ಗೋಹತ್ಯೆ ನಿಷೇಧದಂತಹಾ ಕೇಸರಿ ಪಾಳಯದ ವಿಚಾರಗಳನ್ನು ಜನರು ತಿರಸ್ಕರಿಸಿದ್ದಾರೆಂಬ ಅಪಮಾನಕ್ಕೆ ಪಕ್ಷ ಗುರಿಯಾಗಬೇಕಾದೀತು ಎಂಬ ಎಚ್ಚರಿಕೆಯ ಸಲಹೆಗಳೂ ಹೈಕಮಾಂಡ್ ಅಂಗಳಕ್ಕೆ ಬಂದಿವೆ ಎನ್ನಲಾಗಿದೆ. ಪರಿಸ್ಥಿತಿ ಈ ರೀತಿ ಇರುವಾಗ ಬಿಎಸ್’ವೈ ಸೇಫ್ ಎಂಬುದು ಅವರ ಆಪ್ತರ ಭರವಸೆ. ಅದೇನೇ ಆದರೂ ಮೋದಿ, ಅಮಿತ್ ಶಾ, ನಡ್ಡಾ ಆಲೋಚನೆಗಳ ಮೇಲೆಯೇ ಬಿಎಸ್’ವೈ ಭವಿಷ್ಯ ನಿಂತಿದೆ.

Related posts