ಮೋದಿ ಹಾದಿಯಲ್ಲಿ ಸಿದ್ದು ಆಪ್ತ ಕೈ ನಾಯಕ ಎಂ.ಬಿ.ಪಾಟೀಲ್; ಸಾಮೂಹಿಕ ಕೈಂಕರ್ಯಕ್ಕೆ ಕರೆ..

 ಕೊರೋನಾ ಕಾಲದಲ್ಲಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಲು ದೀಪ ಹಚ್ಚಿ ಎಂದರು ಮೋದಿ.. ಇದೀಗ ಮನೆಗಳಲ್ಲಿ ‘ಇಷ್ಟಲಿಂಗ ಪೂಜೆ’ ನೆರವೇರಿಸುವಂತೆ ಲಿಂಗಾಯತ ಸಮುದಾಯಕ್ಕೆ ಕರೆ ನೀಡಿದ್ದಾರೆ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್..

ಬೆಂಗಳೂರು: ಕೊರೋನಾ ಕಾರಣಕ್ಕಾಗಿ ದೇಶವ್ಯಾಪಿ ಲಾಕ್ ಡೌನ್ ಜಾರಿಯಲ್ಲಿದೆ. ಆದರೂ ಕೂಡಾ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ಸೋಂಕಿನ ವಿರುದ್ದ ಸೆಣಸಾಟ ಸಾಗಿದೆ.

ಈ ಸಂಕಷ್ಟದ ಸಮಯದಲ್ಲಿ ಪ್ರಧಾನಿ ಮೋದಿಯವರು ದೀಪ ಬೆಳಗುವುದೂ ಸೇರಿದಂತೆ ವಿವಿಧ ಕೈಂಕರ್ಯ ಮೂಲಕ ದೇವರಿಗೆ ಮೊರೆಯಿಡಲು ಕರೆ ನೀಡಿದ್ದರು. ಇಡೀ ದೇಶವೇ ಅವರ ಕರೆಯನ್ನು ಅನುಸರಿಸಿರುವುದು ಒಂದು ಇತಿಹಾಸವೆನಿಸಿದೆ. ಇದೀಗ ಮೋದಿಯ ಹಾದಿಯಲ್ಲೇ ಹೆಜ್ಜೆಯಿಟ್ಟಿದ್ದಾರೆ ಸಿದ್ಧರಾಮಯ್ಯ ಆಪ್ತ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್.

ಪ್ರತ್ಯೇಕ ಲಿಂಗಾಯತ ಧರ್ಮ ಬಗ್ಗೆ ಪ್ರತಿಪಾದಿಸುತ್ತಿರುವ ಅವರು ಪ್ರಸ್ತುತ ಕೊರೋನಾ ಮಹಾಮಾರಿ ವೈರಸನ್ಬು ಹೊಡೆದೋಡಿಸಲು ಮನೆಗಳಲ್ಲಿ ‘ಇಷ್ಟಲಿಂಗ ಪೂಜೆ’ ನೆರವೇರಿಸುವಂತೆ ಲಿಂಗಾಯತ ಸಮುದಾಯಕ್ಕೆ ಕರೆ ನೀಡಿದ್ದಾರೆ..

ಎಂ.ಬಿ.ಪಾಟೀಲ್’ರ ಮಾಧ್ಯಮ‌ ಹೇಳಿಕೆ ಹೀಗಿದೆ:

ಎಲ್ಲರಿಗೂ ಶರಣು ಶರಣಾರ್ಥಿ

ಮಾನ್ಯರೇ,
ನಾಡಿನ ಸಮಸ್ತ ಲಿಂಗವಂತರು ಹಾಗೂ ಬಸವಾದಿ ಎಲ್ಲ ಶರಣರ ಭಕ್ತರು ಬರುವ ಸೋಮವಾರ ದಿನಾಂಕ 13 ಎಪ್ರೀಲ್ 2020ರಂದು ಸಂಜೆ 7ಗಂಟೆಗೆ ತಮ್ಮ ತಮ್ಮ ಮನೆಗಳಿಂದಲೇ ಧ್ಯಾನಸ್ಥರಾಗಿ ವಿಶ್ವಕ್ಕೆ ಮಾರಕವಾಗಿರುವ ಕೊರೋನಾ ಹಾವಳಿಯಿಂದ ಮುಕ್ತಗೊಳಿಸಲು ಸಾಮೂಹಿಕ ಪೂಜೆಯನ್ನು ಸಲ್ಲಿಸಬೇಕು ಎಂದು ಬಸವ ಸಮಿತಿ ಅಧ್ಯಕ್ಷ ಶ್ರೀ ಅರವಿಂದ ಜತ್ತಿ ಅವರು ನನಗೆ ದೂರವಾಣಿ ಕರೆ ಮಾಡಿ ತಿಳಿಸಿದ್ದಾರೆ.

ಇಷ್ಟಲಿಂಗ ಪ್ರಾರ್ಥನೆಯು ನಮ್ಮ ಮನಸ್ಸು ಮತ್ತು ದೇಹವನ್ನು ಸಶಕ್ತವನ್ನಾಗಿ ಮಾಡುತ್ತದೆ. ಇದಕ್ಕೆ ನಾಡಿನ ನಮ್ಮ ಸಮಾಜದ ಎಲ್ಲ ಮಠಾಧೀಶರ ಸಮ್ಮತಿ ಹಾಗೂ ಮಾರ್ಗದರ್ಶನಲ್ಲಿ ನಡೆಯುತ್ತಿದೆ. ಬಸವಣ್ಣ ಹೇಳಿದಂತೆ “ಧರೆ ಹತ್ತಿ ಉರಿಯುವಾಗ, ಬೇಲಿ ಕೈಯ ಮೇಯುವಾಗ, ಏರಿ ನೀರುಂಬುವಾಗ’, ಇಷ್ಟಲಿಂಗಕ್ಕೆ ಮೊರೆ ಹೋಗುವುದೇ ನಮಗಿರುವ ಮಾರ್ಗ. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುವ ನಾವೆಲ್ಲರೂ ಇದನ್ನು ಸದ್ದುಗದ್ದಲವಿಲ್ದೆ ಅಚರಿಸೋಣ” ಎಂದು ಜಾಗತಿಕ ಲಿಂಗಾಯತ ಮಹಾಸಭಾ ಕೂಡ ಹೇಳಿದೆ.

ಅಲ್ಲದೇ ಅಖಿಲ ಭಾರತ ವೀರಶೈವ ಮಹಾಸಭಾ, ರಾಷ್ಟ್ರೀಯ ಬಸವ ದಳ, ಬಸವ ಪರ ಸಂಘಟನೆಗಳು ಹಾಗೂ ನಾಡಿನ ಹಲವಾರು ಪರಮಪೂಜ್ಯ ಮಹಾಸ್ವಾಮೀಜಿಯವರು ಸಹಿತ ಇಷ್ಟಲಿಂಗ ಪ್ರಾರ್ಥನೆಗೆ ಕರೆ ನೀಡಿದ್ದಾರೆ.

ಇಡೀ ವಿಶ್ವವನ್ನು ವ್ಯಾಪಿಸಿರುವ ಕೊರೋನಾ ಕಾಯಿಲೆ ಹಲವು ಜೀವಗಳನ್ನು ಬಲಿ ತೆಗೆದುಕೊಂಡು ಕುಟುಂಬಗಳು ಸರ್ವನಾಶವಾಗುತ್ತಿವೆ. ಇಂತಹ ವಿಷಮ ಸ್ಥಿತಿಯಲ್ಲಿ ಈ ರೀತಿಯ ಪೂಜೆ ಹಾಗೂ ಪ್ರಾರ್ಥನೆಗಳು ನಮ್ಮೆಲ್ಲರ ಮನೋಬಲ ಹೆಚ್ಚಿಸುವದಕ್ಕೆ ಸಹಕಾರಿಯಾಗುವವು. ಮಾರಕ ಕಾಯಿಲೆ ಕೊನೆಗಾಣಿಸಲು ಸಧೃಡ ಸಂಕಲ್ಪ ಮಾಡುವದರೊಂದಿಗೆ ಈ ಸಾಮೂಹಿಕ ಇಷ್ಟ ಲಿಂಗ ಪೂಜೆಯಲ್ಲಿ ತಾವೇಲ್ಲರೂ ಪಾಲ್ಗೊಳ್ಳಲು ವೈಯಕ್ತಿಕವಾಗಿ ತಮ್ಮಲ್ಲಿ ಕೋರುತ್ತೇನೆ.

ಎಂ.ಬಿ.ಪಾಟೀಲ್,
ಮಾಜಿ ಗೃಹ ಹಾಗೂ ಜಲಸಂಪನ್ಮೂಲ ಸಚಿವರು. 

ಇದನ್ನೂ ಓದಿ.. ಕೊರೋನಾ ಸೋಂಕು.. ವಾಟ್ಸಪ್ ಶಾಕ್.. ಇನ್ನು ಮೆಸೇಜ್ ಫಾರ್ವಾರ್ಡ್’ಗೆ ನಿರ್ಬಂಧ

Related posts