ಕೊಪ್ಪಳ ಟಾಯ್ಸ್ ಕ್ಲಸ್ಟರ್; ಯಾರಿಂದಲೋ ತಯಾರು ಇನ್ಯಾರದ್ದೋ ಹೆಸರು?

ಬೆಂಗಳೂರು: ಯಾರಿಂದಲೋ ತಯಾರು ಇನ್ಯಾರದ್ದೋ ಹೆಸರು ಎಂಬ ಅಪವಾದಕ್ಕೆ ಗುರಿಯಾಯಿತೇ ದೇಶದ ಮೊದಲ ಟಾಯ್ಸ್ ಕ್ಲಸ್ಟರ್? ಚೀನಾ ಹಿಡಿತದಲ್ಲಿರುವ ಜಾಗತಿಕ ಉತ್ಪಾದನೆ ಮಾರುಕಟ್ಟೆಯಲ್ಲಿ ಭಾರತವೂ ಪಾಲು ಪಡೆಯಬೇಕೆಂಬ ಉದ್ದೇಶದಿಂದ ತಾವು ಸಿಎಂ ಆಗಿದ್ದಾಗ ‘Compete With China’ ರೂಪಿಸಲಾಗಿತ್ತು. ಇದಕ್ಕಾಗಿ ಕೊಪ್ಪಳದಲ್ಲಿ ಆಟಿಕೆ ಕ್ಲಸ್ಟರ್‌ ರಚಿಸಿ, ₹500 ಕೋಟಿ ಹಣ ನೀಡಲಾಗಿತ್ತು. ಸಿಎಂ ಯಡಿಯೂರಪ್ಪ ಅವರು ಆ ಕ್ಲಸ್ಟರ್‌ಗೆ ಇದೀಗ ಮರು ಚಾಲನೆ ನೀಡಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆ ಅಡಿಯಲ್ಲಿ ಆಟಿಕೆ ಉತ್ಪಾದನಾ ಘಟಕ ಆರಂಭಿಸುತ್ತಿರುವುದಾಗಿ ರಾಜ್ಯ ಸರ್ಕಾರ ಹೇಳುತ್ತಿದೆ. ಆದರೆ, ಕೇಂದ್ರ ಸರ್ಕಾರ ‘ಆತ್ಮನಿರ್ಭರ’ ಕಲ್ಪನೆ ಜಾರಿಗೆ ತರುವುದಕ್ಕೂ ಮೊದಲೇ ನನ್ನ ಸರ್ಕಾರ ಸ್ವಾವಲಂಬಿ ಕಲ್ಪನೆಯನ್ನು ಹೊಂದಿತ್ತು. ಅದರ ಭಾಗವಾಗಿಯೇ ಚೀನಾಕ್ಕೆ ಸೆಡ್ಡು ಹೊಡೆಯುವ ಯೋಜನೆಗಳನ್ನು ರೂಪಿಸಿತ್ತು ಎಂದು ಹೆಚ್ಡಿಕೆ ಟ್ವೀಟ್ ಮಾಡಿದ್ದಾರೆ.

7 ಲಕ್ಷ ಕೋಟಿ ಮೊತ್ತದ ಜಾಗತಿಕ ಆಟಿಕೆ ಮಾರುಕಟ್ಟೆಯಲ್ಲಿ ಚೀನಾ ಪ್ರಬಲ ಹಿಡಿತ ಹೊಂದಿದೆ. ಇದರಲ್ಲಿ ಅಲ್ಪ ಪಾಲು ಕಸಿದರೂ ನಮ್ಮವರಿಗೆ ಉದ್ಯೋಗ ನೀಡಬಹುದು, ಆದಾಯ ಕೊಡಿಸಬಹುದು ಎಂಬುದು ನನ್ನ ಸರ್ಕಾರದ ದೂರದೃಷ್ಟಿಯಾಗಿತ್ತು. ಅದಕ್ಕೆ ಮರು ಚಾಲನೆ ನೀಡುತ್ತಿರುವ, ನನ್ನ ಯೋಜನೆಯನ್ನು ಅನುಸರಿಸುತ್ತಿರುವ ಯಡಿಯೂರಪ್ಪ ಅವರಿಗೆ ಆಭಿನಂದನೆಗಳು ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ತನ್ನ ಸರ್ಕಾರದ ಅವಧಿಯಲ್ಲಿ ಇಂಥ ಹಲವು ಕಾರ್ಯಕ್ರಮಗಳನ್ನು ಕೊಡಲಾಗಿದೆ. ಅವುಗಳಲ್ಲಿ ಈ ನೆಲದ ಸ್ವಾಭಿಮಾನ ಸಾರುವ ಯೋಜನೆಗಳೂ ಇವೆ ಎಂಬುದು ಗಮನಾರ್ಹ. ಅವುಗಳನ್ನು ಮರಳಿ ಜಾರಿಗೆ ತರುವುದರ ಕಡೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚಿಂತನೆ ನಡೆಸುವುದು ಅತ್ಯಗತ್ಯ. ತನ್ನ ಯೋಜನೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ, ಆದಾಯ ಸಿಗುವ ಅಂಶಗಳು ಪ್ರಧಾನ ಎಂದವರು ಹೇಳಿದ್ದಾರೆ.

Related posts