ಈವರೆಗೂ ಲಾಕ್ ಡೌನ್ ಜಾರಿಯಿಂದಾಗಿ ಜನ ಪರಿಸ್ಥಿತಿಯ ವ್ಯೂಹದಲ್ಲಿ ಬಂಧಿಯಾಗಿದ್ದಾರೆ. ಒಂದು ವೇಳೆ ಸೀಲ್ ಡೌನ್ ಜಾರಿಯಾದರೆ ಜನರ ಮನೋಭಾವ ಹೇಗಿರಬಹುದು ಎಂಬುದೇ ಮುಂದೆ ಬರುವ ಪ್ರಶ್ನೆ..
ಬೆಂಗಳೂರು: ಕೊರೋನಾ ರಾದಾಂತ ಕೊನೆಗೊಳ್ಳುವ ಲಕ್ಷಣ ಗೋಚರಿಸುತ್ತಿಲ್ಲ. ಎಲ್ಲೆಲ್ಲೂ ಸಮರ ಸಜ್ಜಿನ ಕಾರ್ಯಾಚರಣೆ ಸಾಗಿದೆಯಾದರೂ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಮಹಾರಾಷ್ಟ್ರ, ದೆಹಲಿ ಸಹಿತ ಹಲವು ರಾಜ್ಯಗಳಲ್ಲಿನ ಸೋಂಕಿತರ ಸಂಖ್ಯೆ ಗಮನಿಸಿದಾಗ ಆತಂಕ ಸಹಜವಾಗಿಯೇ ಕಾಡುತ್ತದೆ.
ಲಾಕ್ ಡೌನ್ ಜಾರಿಯಲ್ಲಿದ್ದರೂ ಸೋಂಕು ಹೆಚ್ಚುತ್ತಲೇ ಇದ್ದು ಸೋಂಕಿತರ ಬಗ್ಗೆ ನಿಖರ ಸಂಖ್ಯೆ ಸಿಗುತ್ತಿಲ್ಲ. ಪರಿಸ್ಥಿತಿಗೆ ಇದುವೇ ಸವಾಲಾಗಿರುವುದು. ಈ ಹಿನ್ನೆಲೆಯಲ್ಲಿ ಅನೇಕ ರಾಜ್ಯಗಳು ಲಾಕ್ ಡೌನ್ ವಿಸ್ತರಣೆಗೆ ಒಲವು ತೋರಿದ್ದು, ಇದನ್ನು ಮತ್ತಷ್ಟು ದಿನ ಮುಂದುವರಿಸುವಂತೆ ಕೇಂದ್ರ ಸರ್ಕಾರಕ್ಕೆ ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ಮನವಿ ಮಾಡಿದ್ದಾರೆ.
ಈ ನಡುವೆ ಕೇಂದ್ರದ ಮುಂದಿನ ನಿರ್ಧಾರಗಳೇನಿರಬಹುದು ಎಂಬ ಕುತೂಹಲ ಎಲ್ಲರಲ್ಲೂ ಕಾಡಿದೆ. ಪ್ರಸ್ತುತ ಪರಿಸ್ಥಿತಿ ಹಾಗೂ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂಬ ಸಲಹೆ ಪಡೆಯುವ ಉದ್ದೇಶದಿಂದ ವೀಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಲಿದ್ದಾರೆ.
ಇನ್ನೊಂದೆಡೆ ಲಾಕ್ ಡೌನ್ ಬದಲಿಗೆ ಸೀಲ್ ಡೌನ್ ಆದೇಶ ಜಾರಿಗೆ ತರುವ ಬಗ್ಗೆಯೂ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ, ಕೊರೋನಾ ಸೋಂಕು ಪತ್ತೆಯಾಗಿರುವ ಪ್ರದೇಶ ಅಥವಾ ಜಿಲ್ಲೆಗಳಲ್ಲಿ ಈ ಕ್ರಮ ಕೈಗೊಳ್ಳುವ ಸಾಧ್ಯತೆಗಳೂ ಇವೆ ಎನ್ನಲಾಗುತ್ತಿದೆ, ಈ ವಿಚಾರದಲ್ಲಿ ಪ್ರಧಾನಿ ನರೇಂದ್ರಮೋದಿಯವರ ಘೋಷಣೆಯನ್ನು ಎದುರುನೋಡಲಾಗುತ್ತಿದೆ.