ರಾಜ್ಯ ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆ.ವಿ.ನಾಗರಾಜು ಪದಗ್ರಹಣ

ಬೆಂಗಳೂರು: ರಾಜ್ಯ ಮಾವು ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕೆ.ವಿ. ನಾಗರಾಜು ಅಧಿಕಾರ ಸ್ವೀಕರಿಸಿದ್ದಾರೆ.
ಬೆಂಗಳೂರಿನ ಲಾಲ್ ಬಾಗ್’ನಲ್ಲಿರುವ ಡಾ.ಎಂ.ಎಚ್.ಮರೀಗೌಡ ಸಭಾಂಗಣದಲ್ಲಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಅಭಿವೃದ್ಧಿ ನಿಗಮದ ಅಧ್ಯಕ್ಷರ ಪದಗ್ರಹಣ ಸಮಾರಂಭ ಬುಧವಾರ ನೆರವೇರಿತು.

ಸಮಾರಂಭದಲ್ಲಿ ಪಾಲ್ಗೊಂಡ ಆರೋಗ್ಯ ಸಚಿವ ಡಾ.ಸುಧಾಕರ್, ರಾಜ್ಯದಲ್ಲಿ ಮಾವು ಬೆಳೆಗಾರರಿಗೆ ನಿಗಮದಿಂದ ಹೆಚ್ಚಿನ ಪ್ರಯೋಜನ ಆಗಬೇಕಿದೆ. ತಳಿ ಆಯ್ಕೆಯಿಂದ ಮಾರುಕಟ್ಟೆ ಒದಗಿಸುವ ತನಕ ನಿಗಮವು ಬೆಳೆಗಾರ ಮತ್ತು ಗ್ರಾಹಕರಿಗೆ ಸೇತುವೆಯಂತೆ ಕಾರ್ಯ ನಿರ್ವಹಿಸಬೇಕಿದೆ ಎಂದರು.

ನಿಗಮದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಾಗರಾಜು ಮಾತನಾಡಿ, ಸಹಕಾರ ಕ್ಷೇತ್ರದಲ್ಲಿನ ಅನುಭವ ಮತ್ತು ಮಾವು ಬೆಳೆಗಾರರ ಸಲಹೆಗಳನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯ ನಿರ್ವಹಿಸುವುದಾಗಿ ಹೇಳಿದರು. ತಮಗೆ ಈ ಅವಕಾಶ ದೊರಕಿಸಿಕೊಟ್ಟಿರುವ ಸಿಎಂ ಮತ್ತು ಸಚಿವ ಸುಧಾಕರ್ ಅವರ ನಂಬಿಕೆಗೆ ಚ್ಯುತಿಯಾಗದಂತೆ ಕಾರ್ಯ ನಿರ್ವಹಿಸುತ್ತೇನೆ ಎಂದರು.

ನಿಗಮದ ಮಾಜಿ ಅಧ್ಯಕ್ಷ ಗೋಪಾಲಕೃಷ್ಣ, ಮುಖಂಡರಾದ ರಾಮಲಿಂಗಪ್ಪ, ಚನ್ನಕೃಷ್ಣಾರೆಡ್ಡಿ, ನಾರಾಯಣಸ್ವಾಮಿ, ನಂಜುಂಡಪ್ಪ, ನಿಗಮದ ವ್ಯವಸ್ಥಾಪಕ ನಿರ್ದೇಶಕ ನಾಗರಾಜು, ಹಿರಿಯ ತಜ್ಞ ಹಿತ್ತಲಮನಿ ಹಾಗೂ ಮಾವು ಬೆಳೆಗಾರರು ಉಪಸ್ಥಿತರಿದ್ದರು.

Related posts