ಮಕ್ಕಳ ಸುರಕ್ಷತೆ ನಮ್ಮದು, ಶಾಲೆಗೆ ಧೈರ್ಯವಾಗಿ ಕಳಿಸಿ: ಸುರೇಶ್ ಕುಮಾರ್ ಮನವಿ

ಬೆಂಗಳೂರು: ಶಾಲೆಯಲ್ಲಿ ಮಕ್ಕಳ ಸುರಕ್ಷತೆಯ ಜವಾಬ್ದಾರಿ ನಮ್ಮದು, ಎಲ್ಲ ಪೋಷಕರು ಮಕ್ಕಳನ್ನು ಆಶೀರ್ವದಿಸಿ ಧೈರ್ಯವಾಗಿ ಶಾಲೆಗೆ ಕಳಿಸಿ, ಅವರ ಶೈಕ್ಷಣಿಕ ಭವಿಷ್ಯ ಉಜ್ವಲವಾಗಲಿ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ರಾಜ್ಯದ ಪೋಷಕರಲ್ಲಿ ಮನವಿ ಮಾಡಿದ್ದಾರೆ.

ಜ. 1ರ ಶುಕ್ರವಾರದಿಂದ ಪ್ರಸ್ತುತ ಶೈಕ್ಷಣಿಕ ವರ್ಷದ 10 ಮತ್ತು 12ನೇ ತರಗತಿಗಳು ಸುರಕ್ಷಿತ ವಾತಾವರಣದಲ್ಲಿ ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮುನ್ನಾ ದಿನವಾದ ಗುರುವಾರ ರಾಜ್ಯದ ಮಕ್ಕಳ ಪೋಷಕರಿಗೆ ಮನವಿ ಮಾಡಿಕೊಂಡಿರುವ ಅವರು, ಶಾಲೆಗಳಲ್ಲಿ ನಿಮ್ಮ ಮಕ್ಕಳನ್ನು ನಮ್ಮ ಮಕ್ಕಳಂತೆಯೇ ನೋಡಿಕೊಳ್ಳುತ್ತೇವೆ. ಶಾಲೆ ಮಕ್ಕಳ ಇನ್ನೊಂದು ಮನೆಯಾಗಿರಲಿದ್ದು, ಶಾಲಾ ವಿದ್ಯಾಲಯ ಸುರಕ್ಷಿತಾಲಯವಾಗಿರಲಿದೆ ಎಂದು ಭರವಸೆ ನೀಡುವೆ ಎಂದು ಅಭಯ ನೀಡಿದ್ದಾರೆ.

‘ಕೊರೋನಾ ಓಡಿಸೋಣ.. ಮಕ್ಕಳನ್ನು ಸುರಕ್ಷಿತವಾಗಿ ಓದಿಸೋಣ…’ ಎಂಬ ಧ್ಯೇಯದೊಂದಿಗೆ ಆರಂಭವಾಗಲಿರುವ ಈ ಶೈಕ್ಷಣಿಕ ವರ್ಷ ಮಕ್ಕಳ ಬಾಳಿಗೆ ಒಂದು ಹೊಸ ಪರ್ವಕಾಲವಾಗಿ ಹೊರಹೊಮ್ಮಲಿದೆ. ಶಾಲೆಗಳಲ್ಲಿ ಮಕ್ಕಳ ಕಲರವವೇ ಇರಲಿಲ್ಲ. ಶಾಲೆಗಳು ಮುಚ್ಚಿಕೊಂಡಿದ್ದವು, ಮೈದಾನಗಳು ಬಿಕೋ ಎನ್ನುತ್ತಿದ್ದವು. ಅದೆಲ್ಲಕ್ಕೂ ಅಂತ್ಯವೆಂಬಂತೆ ಶಾಲೆಗಳು ಆರಂಭವಾಗುತ್ತಿರುವುದು ಮಕ್ಕಳು ಮತ್ತು ಪೋಷಕರಲ್ಲಿ ಒಂದು ಹೊಸ ಉತ್ಸಾಹಕ್ಕೆ ಕಾರಣವಾಗಿದ್ದು, ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ತಮ್ಮ ಒಪ್ಪಿಗೆ ಪತ್ರ ನೀಡಿ ಕಳಿಸಬೇಕು ಎಂದು ಸಚಿವರು ಹೇಳಿದ್ದಾರೆ. ಶಾಲೆಗಳು ಆರಂಭವಾಗುತ್ತಿರುವುದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಪೋಷಕರು ಮತ್ತು ಮಕ್ಕಳಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದ್ದು, ಮಕ್ಕಳಂತೂ ಶಾಲೆಯಲ್ಲಿ ಬಹುದಿನಗಳ ನಂತರ ತಮ್ಮ ಗೆಳೆಯರನ್ನು ನೋಡಲು ಕಾತರರಾಗಿ ಶಾಲೆ ಆರಂಭವಾಗು ಕ್ಷಣಗಣನೆಯಲ್ಲಿದ್ದಂತೆ ತೋರುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಕೆಲವೇ ತಿಂಗಳಲ್ಲಿ ಮಂಡಳಿ ಪರೀಕ್ಷೆಗಳಿರುವ ಹಿನ್ನೆಲೆಯಲ್ಲಿ 10 ಮತ್ತು 12ನೇ ತರಗತಿಗಳ ಮಕ್ಕಳಿಗೆ ಶಾಲಾ ತರಗತಿಗಳು ಪುಟ್ಟ ಪುಟ್ಟ ತಂಡಗಳಲ್ಲಿ ಸಾಮಾಜಿಕ ಅಂತರದಲ್ಲಿ ಆರಂಭಗೊಂಡರೆ, 6ರಿಂದ 9ನೇ ತರಗತಿಗಳ ಪರಿಷ್ಕೃತ ವಿದ್ಯಾಗಮ ತರಗತಿಗಳು ಸುರಕ್ಷಿತ ಶಾಲಾವರಣದಲ್ಲಿ ನಡೆಯಲಿವೆ. ಶಾಲೆಗಳ ಆರಂಭದ ವಿಚಾರದಲ್ಲಿ ಶಾಲಾಭಿವೃದ್ಧಿ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು ತೋರುತ್ತಿರುವ ಉತ್ಸುಕತೆ ನಮಗೆ ಹೆಚ್ಚಿನ ಪ್ರೋತ್ಸಾಹ ಮತ್ತು ಪ್ರೇರಣೆಗೆ ಕಾರಣವಾಗಿವೆ. 2020 ಕೊರೋನ ವರ್ಷವಾದರೆ, 2021ನೇ ವರ್ಷ ಕೊರೋನಾ ಎದುರಿಸುವ ಶಕ್ತಿಯನ್ನು ಪಡೆಯುವ ವರ್ಷವಾಗಿದ್ದು, ಅದು ನಮ್ಮ ಮಕ್ಕಳೇ ನಮಗೆ ನಿದರ್ಶನವಾಗಲಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

Related posts