ಬೆಂಗಳೂರು: ಲಾಕ್’ಡೌನ್ ಸಂಕಷ್ಟಕಾಲದಲ್ಲಿ ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಪ್ರಕಟಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅಭಿನಂದಿಸಿದ್ದಾರೆ. ರಾಜ್ಯದಲ್ಲಿ ಕಾರ್ಮಿಕರು ಅತಂತ್ರ ಸ್ಥಿತಿಯಲ್ಲಿದ್ದು ಅವರ ನೆರವಿಗೆ ಧಾವಿಸುವುದು ಸರ್ಕಾರದ ಕರ್ತವ್ಯವಾಗಿದೆ. ಇದೀಗ ಅಗಸರು, ಕ್ಷೌರಿಕರು, ಆಟೋ-ಟ್ಯಾಕ್ಸಿ ಚಾಲಕರು ಸೇರಿದಂತೆ ವಿವಿಧ ಕ್ಷೇತ್ರಗಳ ಶ್ರಮಿಕರ ಬಗ್ಗೆಯೂ ಮುಖ್ಯಮಂತ್ರಿಯವರು ಕಾಲಜಿ ವಹಿಸಿದ್ದಾರೆ ಎಂದವರು ಬಣ್ಣಿಸಿದ್ದಾರೆ. ಕೊರೋನಾ ನಿಯಂತ್ರಣ ವಿಚಾರದಲ್ಲೂ ಮುಖ್ಯಮಂತ್ರಿ ನೇತೃತ್ವದಲ್ಲಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಚಿವ ಸಿ.ಟಿ.ರವಿ ತಿಳಿಸಿದ್ದಾರೆ.
ಸಿಎಂಗೆ ಬಿಜೆಪಿ ಅಭಿನಂದನೆ
ಇದೆ ವೇಳೆ, ರಾಜ್ಯದ ಆರ್ಥಿಕ ಪರಿಸ್ಥಿತಿ ಸಂಕಷ್ಟದಲ್ಲಿದ್ದರೂ ರಾಜ್ಯದ ಅನೇಕ ಬಡ ಶ್ರಮಿಕ ವರ್ಗದ ಜನರಿಗೆ ಸರ್ಕಾರದಿಂದ 1610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿರುವುದನ್ನು ಸ್ವಾಗತಿಸಿರುವ ರಾಜ್ಯ ಬಿಜೆಪಿ, ಸಿಎಂ ಯಡಿಯೂರಪ್ಪ ಅವರನ್ನು ಅಭಿನಂದಿಸಿದೆ. ಈ ಸಂಬಂಧ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ್, ಸಚಿವ ಶ್ರೀ ಸಿ.ಟಿ.ರವಿ ಅವರನ್ನೊಳಗೊಂಡ ಬಿಜೆಪಿ ನಾಯಕರ ನಿಯೋಗ ಯಡಿಯೂರಪ್ಪ ಅವನ್ನು ಭೇಟಿಯಾಗಿ ಅಭಿನಂದನೆ ಸಲ್ಲಿಸಿತು. ಶಾಸಕರಾದ ರಾಜುಗೌಡ ನಾಯಕ, ಡಾ.ಶಿವರಾಜ ಪಾಟೀಲ, ಬಿ.ಸಿ.ನಾಗೇಶ್, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ ಸೇರಿದಂತೆ ಪಕ್ಷದ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ರಾಜ್ಯದ ಇನ್ನೂ ಹಲವಾರು ಸಣ್ಣ ಬಡ ಶ್ರಮಿಕ ವರ್ಗವಾದ ನೊಂದಾಯಿತ ಚಮ್ಮಾರರು, ದರ್ಜಿಗಳು, ಕುಂಬಾರರು, ಕಮ್ಮಾರರು, ಮರ ಬುಟ್ಟಿ ಹೆಣೆಯುವವರು, ನೊಂದಾಯಿತ ಅಡುಗೆ ಮಾಡುವವರು, ವಿಶ್ವಕರ್ಮಿಗಳು, ಅರ್ಚಕರು, ಬಡಿಗರು, ಹೂ ಕಟ್ಟುವವರು, ಕುಶಲಕರ್ಮಿಗಳು, ಪೋಟೋಗ್ರಾಫರಗಳು, ಟೂರಿಸ್ಟ್ ಗೈಡ್, ಪ್ರವಾಸಿ ಮಿತ್ರರು ಸೇರಿದಂತೆ ಇನ್ನು ರಾಜ್ಯದ ಅನೇಕ ಸಣ್ಣ-ಪುಟ್ಟ ಕೆಲಸ ಮಾಡುವ ಶ್ರಮಿಕ ವರ್ಗಕ್ಕೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿ ಇವರಿಗೂ ಕೂಡ ವಿಶೇಷ ಆರ್ಥಿಕ ಸಹಾಯ ಮಾಡಬೇಕೆಂದು ಈ ನಿಯೋಗ ಮುಖ್ಯಮಂತ್ರಿಗೆ ಮನವಿ ಮಾಡಿತು.