ಉತ್ತರ ಕರ್ನಾಟಕದಲ್ಲಿ ಮಳೆ ಆರ್ಭಟ; ಬೆಳೆ ಹಾನಿ

ಬೀದರ್: ಉತ್ತರ ಕರ್ನಾಟಕದಲ್ಲಿ ಮಳೆ ಅವಾಂತರ ಮುಂದುವರಿದಿದೆ. ಭಾರೀ ಮಳೆ ಪ್ರವಾಹದಿಂದಾಗಿ ಹಲವು ಗ್ರಾಮಗಳಲ್ಲಿ ಸಂಪರ್ಕ ಕಡಿದುಕೊಂಡಿದೆ. ಸಾವಿರಾರು ಎಕ್ರೆ ಪ್ರದೇಶದಲ್ಲಿನ ಬೆಲೆ ಹಾನಿಗೀಡಾಗಿವೆ.

ಬೀದರ್ ಜಿಲ್ಲೆಯ ಕಮಠಾಣಾ ಬಳಿಯ ಹಳ್ಳ ತುಂಬಿ ಹರಿಯುತ್ತಿದ್ದು, ರೈತರ ಜಮೀನುಗಳಲ್ಲಿ ನೀರು ನುಗ್ಗಿದ ಪರಿಣಾಮ ಬೆಳೆಗಳು ಹಾನಿಗಿಡಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಈ ಭಾರಿ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಆದರೆ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೆಸರು, ಉದ್ದು, ತೊಗರಿ, ಕಬ್ಬು ಸೇರಿದಂತೆ ಬಹುತೇಕ ಬೆಳೆಗಳು ಹಾಳಾಗಿವೆ. ಬೆಳೆ ಕಳೆದುಕೊಂಡ ರೈತರಿಗೆ ಶೀಘ್ರವಾಗಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.

ಬೆಳೆ ನಷ್ಟ ಸಮೀಕ್ಷೆ ನಡೆಸಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಈ ಹಿಂದೆ ಕೂಡ ಒತ್ತಾಯ ಮಾಡಿದ್ದೇನೆ. ಈಗಲೂ ಒತ್ತಾಯ ಮಾಡುತ್ತೇನೆ. ಸಂಕಷ್ಟಕ್ಕೆ ಸಿಲುಕಿದ ರೈತರಿಗೆ ಪರಿಹಾರ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದು ಬಂಡೆಪ್ಪ ಖಾಶೆಂಪುರ್ ಒತ್ತಾಯಿಸಿದರು.

Related posts