ಕೇರಳ: ಮಾಜಿ ಸಿಪಿಎಂ ಶಾಸಕ ಎಸ್. ರಾಜೇಂದ್ರನ್ ಬಿಜೆಪಿಗೆ ಸೇರ್ಪಡೆ

ತಿರುವನಂತಪುರಂ: ಕೇರಳ ರಾಜಕೀಯದಲ್ಲಿ ವಾರಗಳ ಕಾಲ ನಡೆದ ಊಹಾಪೋಹಗಳಿಗೆ ತೆರೆ ಎಳೆದಂತೆ, ಮಾಜಿ ಸಿಪಿಎಂ ಶಾಸಕ ಎಸ್. ರಾಜೇಂದ್ರನ್ ಭಾನುವಾರ ಅಧಿಕೃತವಾಗಿ ಭಾರತೀಯ ಜನತಾ ಪಕ್ಷಕ್ಕೆ ಸೇರ್ಪಡೆಯಾದರು. ತಿರುವನಂತಪುರಂನಲ್ಲಿರುವ ಬಿಜೆಪಿ ರಾಜ್ಯ ಪ್ರಧಾನ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ರಾಜೇಂದ್ರನ್ ಅವರಿಗೆ ಪಕ್ಷದ ಸದಸ್ಯತ್ವ ನೀಡಿದರು.

ಈ ತಿಂಗಳ ಆರಂಭದಲ್ಲೇ ಬಿಜೆಪಿ ಸೇರುವ ಇಂಗಿತ ವ್ಯಕ್ತಪಡಿಸಿದ್ದ ರಾಜೇಂದ್ರನ್, ಜನವರಿ 10ರಂದು ರಾಜೀವ್ ಚಂದ್ರಶೇಖರ್ ಅವರನ್ನು ಭೇಟಿ ಮಾಡಿ ತಮ್ಮ ರಾಜಕೀಯ ಭವಿಷ್ಯ ಕುರಿತು ಚರ್ಚೆ ನಡೆಸಿದ್ದರು. ಯಾವುದೇ ವೈಯಕ್ತಿಕ ಷರತ್ತುಗಳು ಅಥವಾ ಬೇಡಿಕೆಗಳಿಲ್ಲದೆ ಬಿಜೆಪಿ ಸೇರ್ಪಡೆಗೊಂಡಿರುವುದಾಗಿ ಅವರು ಸ್ಪಷ್ಟಪಡಿಸಿದ್ದಾರೆ.

ಮೂರು ಬಾರಿ ಶಾಸಕರಾಗಿದ್ದ ರಾಜೇಂದ್ರನ್, ಸುಮಾರು 15 ವರ್ಷಗಳ ರಾಜಕೀಯ ಅನುಭವ ಹೊಂದಿದ್ದಾರೆ. ಇಡುಕ್ಕಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಅವರು, ಕಳೆದ ನಾಲ್ಕು ವರ್ಷಗಳಿಂದ ಸಿಪಿಎಂನೊಂದಿಗೆ ಅಂತರ ಹೆಚ್ಚಿಸಿಕೊಂಡಿದ್ದರು. ಹಿಂದಿನ ವಿಧಾನಸಭಾ ಚುನಾವಣೆಯ ಬಳಿಕ ಎಲ್‌ಡಿಎಫ್ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿತ್ತು.

ಅಮಾನತು ಅವಧಿ ಮುಗಿದ ಬಳಿಕವೂ ಸದಸ್ಯತ್ವ ಪುನಃಸ್ಥಾಪನೆ ಆಗದ ಕಾರಣ ರಾಜೇಂದ್ರನ್ ಸಿಪಿಎಂನಿಂದ ದೂರ ಉಳಿದರು. ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ, ವಿಶೇಷವಾಗಿ ಇಡಮಲಕುಡಿ ಮತ್ತು ದೇವಿಕುಲಂ ಪ್ರದೇಶಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸುವ ಮೂಲಕ ಗಮನ ಸೆಳೆದಿದ್ದರು. ದೇವಿಕುಲಂ ಕ್ಷೇತ್ರದಿಂದ ಮತ್ತೆ ಸ್ಪರ್ಧಿಸುವ ಉದ್ದೇಶವಿಲ್ಲ ಎಂದು ಅವರು ಹೇಳಿದ್ದರೂ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕತ್ವವು ಅವರ ಪಾತ್ರವನ್ನು ಮರುಪರಿಶೀಲಿಸಬಹುದು ಎಂದು ರಾಜಕೀಯ ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.

Related posts