ಜೈಲಿನಲ್ಲಿರುವ ಸಚಿವರು ಹುದ್ದೆ ಉಳಿಸಿಕೊಳ್ಳಲು ಸಾಧ್ಯವಿಲ್ಲ: ಮೋದಿ

ಕೋಲ್ಕತ್ತಾ: ಭ್ರಷ್ಟಾಚಾರದ ಆರೋಪದಡಿ ಜೈಲಿನಲ್ಲಿರುವ ಸಚಿವರು ಹುದ್ದೆಯಲ್ಲಿ ಮುಂದುವರಿಯುವಂತಿಲ್ಲ ಎಂಬುದನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. 130ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಅವರು, “ಅಂತಹ ಕಾನೂನನ್ನು ತರಲು ಸರ್ಕಾರ ನಿರ್ಧರಿಸಿದಾಗ, ಕಾಂಗ್ರೆಸ್ ಮತ್ತು ತೃಣಮೂಲ ಕಾಂಗ್ರೆಸ್ ಸೇರಿ ‘ಇಂಡಿಯಾ ಬ್ಲಾಕ್’ ವಿರೋಧಿಸುತ್ತವೆ. ಭ್ರಷ್ಟ ನಾಯಕರು ಶಿಕ್ಷೆಗೆ ಗುರಿಯಾಗಬಾರದೆಂದು ಅವರು ಕೋಪಗೊಂಡಿದ್ದಾರೆ” ಎಂದು ಹೇಳಿದರು.

ಕೋಲ್ಕತ್ತಾ ಸಮೀಪದ ಡಮ್ ಡಮ್ ಸೆಂಟ್ರಲ್ ಜೈಲು ಮೈದಾನದಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಪ್ರಧಾನಿ, ಟಿಎಂಸಿಯ ಮಾಜಿ ಶಿಕ್ಷಣ ಸಚಿವ ಪಾರ್ಥ ಚಟರ್ಜಿ ಹಾಗೂ ಪಡಿತರ ಹಗರಣದಲ್ಲಿ ಬಂಧಿತರಾದ ಜ್ಯೋತಿ ಪ್ರಿಯಾ ಮಲ್ಲಿಕ್ ಅವರನ್ನು ಉಲ್ಲೇಖಿಸಿದರು. “ಮನೆಗಳಿಂದ ಕೋಟಿ ಕೋಟಿ ರೂಪಾಯಿ ನಗದು ವಶವಾಗಿದ್ದರೂ ಅವರು ಹುದ್ದೆ ತ್ಯಜಿಸಲು ನಿರಾಕರಿಸಿದರು. ಇಂಥವರನ್ನು ಹುದ್ದೆಯಲ್ಲಿ ಮುಂದುವರಿಸಲು ಬಿಡಬೇಕೇ ಅಥವಾ ಜೈಲಿನಲ್ಲೇ ಇರಿಸಬೇಕೇ?” ಎಂದು ಪ್ರಶ್ನಿಸಿದರು.

ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರ ಭ್ರಷ್ಟಾಚಾರ ಮತ್ತು ಅಪರಾಧದ ಪ್ರತೀಕವಾಗಿದೆ ಎಂದು ಮೋದಿ ಆರೋಪಿಸಿದರು. “ಬಂಗಾಳದಲ್ಲಿ ಜನರು ಈಗ ಒಂದೇ ಕೂಗುತ್ತಿದ್ದಾರೆ – ಟಿಎಂಸಿ ಕೆ ಸೊರಾವೋ, ಬಾಂಗ್ಲಾ ಕೆ ಬಚಾವೋ. ನಿಜವಾದ ಬದಲಾವಣೆ ಎಂದರೆ ಮಹಿಳೆಯರ ಭದ್ರತೆ, ಭ್ರಷ್ಟ ನಾಯಕರನ್ನು ಜೈಲಿನಲ್ಲಿ ಇಡುವುದು, ಜನರ ಜೀವನ ಸುಧಾರಿಸುವುದು. ಅದನ್ನು ತರಬಲ್ಲದು ಕೇವಲ ಬಿಜೆಪಿ” ಎಂದು ಪ್ರತಿಪಾದಿಸಿದರು.

ರಾಜ್ಯದ ಅಭಿವೃದ್ಧಿ ನಿಧಿಗಳನ್ನು ಟಿಎಂಸಿ ದುರുപಯೋಗ ಮಾಡುತ್ತಿದೆ ಎಂದು ಅವರು ಟೀಕಿಸಿದರು. “ಸ್ಮಾರ್ಟ್ ಸಿಟಿ ಮಿಷನ್ ಸೇರಿದಂತೆ ಕೇಂದ್ರದ ಅನೇಕ ಯೋಜನೆಗಳಿಗೆ ಟಿಎಂಸಿ ಅಡೆತಡೆ ಸೃಷ್ಟಿಸಿದೆ. ಅಭಿವೃದ್ಧಿ ವಿರೋಧಿ ರಾಜಕೀಯದಿಂದ ಬಂಗಾಳ ಹಿಂದುಳಿದಿದೆ. ಜನರು ಈಗ ‘ಟಿಎಂಸಿ ಜಾಬೇ, ಬಿಜೆಪಿ ಆಸ್ಬೇ’ ಎಂದು ಹೇಳುತ್ತಿದ್ದಾರೆ” ಎಂದು ಹೇಳಿದರು.

ಮಮತಾ ಸರ್ಕಾರ ತನ್ನ ತುಷ್ಟೀಕರಣ ರಾಜಕೀಯದ ಭಾಗವಾಗಿ ಒಳನುಸುಳುವವರನ್ನು ಬೆಂಬಲಿಸುತ್ತಿದೆ ಎಂಬುದನ್ನೂ ಪ್ರಧಾನಿ ಆರೋಪಿಸಿದರು. “ಬಂಗಾಳದ ಜನರಿಗೆ ಉದ್ಯೋಗ, ಭದ್ರತೆ ನೀಡಲು ಬಯಸುವ ನಾವು, ದೇಶದ ಜನರಿಗೆ ಹಾನಿ ಮಾಡುತ್ತಿರುವ ಒಳನುಸುಳುವವರನ್ನು ಉಳಿಯಲು ಬಿಡುವುದಿಲ್ಲ. ಗಡಿ ಪ್ರದೇಶಗಳ ಜನಸಂಖ್ಯಾಶಾಸ್ತ್ರ ಬದಲಾಗುತ್ತಿದೆ, ಇದನ್ನು ತಡೆಯುವುದು ಬಿಜೆಪಿಯೇ ಸಾಧ್ಯ” ಎಂದು ಹೇಳಿದರು.

Related posts