ತುಂಗಭದ್ರಾ ಜಲಾಶಯಕ್ಕೆ ಹೊಸ ಗೇಟ್‌ಗಳನ್ನು ಅಳವಡಿಸಲು ಸರ್ಕಾರ ಟೆಂಡರ್‌

ಬೆಂಗಳೂರು: ತುಂಗಭದ್ರಾ ಜಲಾಶಯದಲ್ಲಿ 39 ಹೊಸ ಗೇಟ್‌ಗಳನ್ನು ಅಳವಡಿಸಲು ಸರ್ಕಾರ ಟೆಂಡರ್‌ ಕರೆಯಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾಹಿತಿ ನೀಡಿದರು. ಈಗಾಗಲೇ 6 ಗೇಟ್‌ಗಳ ಅಳವಡಿಕೆ ಕಾಮಗಾರಿ ನಡೆಯುತ್ತಿದೆ ಎಂದು ತಿಳಿಸಿದರು.

ವಿಧಾನಸಭಾ ಅಧಿವೇಶನದಲ್ಲಿ ನಿಯಮ 69ರಡಿ ಪ್ರಸ್ತಾಪವಾದ ತುಂಗಭದ್ರಾ ಜಲಾಶಯದ ಸಮಸ್ಯೆಗಳ ಕುರಿತ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, “ಜಲಾಶಯ ಬೋರ್ಡ್‌ 1633 ಅಡಿ ಬದಲಿಗೆ 1626 ಅಡಿ ಮಟ್ಟದಲ್ಲಿ ನೀರು ಸಂಗ್ರಹಿಸಲು ಸೂಚಿಸಿದೆ. ತಾಂತ್ರಿಕ ತೊಂದರೆಯಿಂದಾಗಿ ಈ ಬಾರಿ ರೈತರಿಗೆ ಎರಡನೇ ಬೆಳೆಗೆ ನೀರು ನೀಡಲು ಸಾಧ್ಯವಾಗುವುದಿಲ್ಲ” ಎಂದರು.

ರೈತರ ಹಿತವನ್ನು ಕಾಪಾಡುವ ಬದ್ಧತೆಯನ್ನು ಸರ್ಕಾರ ಪುನರುಚ್ಚರಿಸಿದ ಡಿ.ಕೆ.ಶಿವಕುಮಾರ್, ಕುಡಿಯುವ ನೀರು ಹಾಗೂ ಕೈಗಾರಿಕೆಗಳಿಗೆ ನೀರಿನ ಪೂರೈಕೆಗೆ ಆದ್ಯತೆ ನೀಡಲಾಗುವುದಾಗಿ ತಿಳಿಸಿದರು. ಜೊತೆಗೆ, ದುರಸ್ತಿ ಕಾಮಗಾರಿಗಳು ಹಾಗೂ ಸಿಬ್ಬಂದಿ ಕೊರತೆ ನಿವಾರಣೆಗೆ ತಕ್ಷಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

Related posts