ಬಿಬಿಎಂಪಿ ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ

ಬೆಂಗಳೂರು: ಬೆಂಗಳೂರು ನಗರ ಪಾಲಿಕೆ (ಬಿಬಿಎಂಪಿ) ಚುನಾವಣೆ ನಡೆಸಲು ಸರ್ಕಾರ ಸಿದ್ಧತೆ ಆರಂಭಿಸಿದ್ದು, ಈ ಕುರಿತು ರಾಜ್ಯ ಚುನಾವಣಾ ಆಯೋಗಕ್ಕೆ ಅಧಿಕೃತ ಪತ್ರ ಬರೆದಿರುವುದಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿಧಾನ ಪರಿಷತ್ತಿನಲ್ಲಿ ಗುರುವಾರ ಮಾಹಿತಿ ನೀಡಿದರು.

ವಿಧಾನ ಪರಿಷತ್ತಿನಲ್ಲಿ ಜೆಡಿಎಸ್ ಸದಸ್ಯ ಟಿ.ಎನ್. ಜವರಾಯಿ ಗೌಡ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಗ್ರೇಟರ್ ಬೆಂಗಳೂರು ಪ್ರಾಧಿಕಾರ ಕಾಯ್ದೆ (ಜಿಬಿಎ) ಮೇ 15ರಿಂದ ಜಾರಿಗೆ ಬಂತು. ಜುಲೈ 19ರಂದು ಐದು ನಿಗಮಗಳನ್ನು ರಚಿಸಲಾಗಿದೆ. ಆಕ್ಷೇಪಣೆ ಸಲ್ಲಿಸಲು ಆಗಸ್ಟ್ 18ರವರೆಗೆ ಅವಕಾಶ ನೀಡಿದ್ದೇವೆ. ಕೆಲವು ಪ್ರದೇಶಗಳನ್ನು ಸೇರಿಸಲಾಗಿದ್ದು, ಇನ್ನೂ ಕೆಲವು ಪ್ರದೇಶಗಳನ್ನು ನಂತರ ಸೇರಿಸಲಾಗುವುದು. ವಾರ್ಡ್‌ಗಳ ವಿಂಗಡಣೆ ನವೆಂಬರ್ 1ರೊಳಗೆ ಪೂರ್ಣಗೊಳ್ಳಲಿದೆ. ಇದರ ಜವಾಬ್ದಾರಿ ಬಿಬಿಎಂಪಿ ಆಯುಕ್ತರ ನೇತೃತ್ವದ ವಿಶೇಷ ತಂಡಕ್ಕೆ ನೀಡಲಾಗಿದೆ. ಈ ಸಂಬಂಧ ನಾವು ನ್ಯಾಯಾಲಯಕ್ಕೂ ಅಫಿಡವಿಟ್ ಸಲ್ಲಿಸಿದ್ದೇವೆ” ಎಂದರು.

ಸದಸ್ಯರೊಬ್ಬರು ತಕ್ಷಣ ಚುನಾವಣೆ ನಡೆಸಬೇಕು ಎಂಬ ಅಭಿಪ್ರಾಯ ವ್ಯಕ್ತಪಡಿಸಿದಾಗ, “ನಾನು ಈ ಸಲಹೆಯನ್ನು ಸಂಪೂರ್ಣ ಒಪ್ಪುತ್ತೇನೆ” ಎಂದು ಶಿವಕುಮಾರ್ ಸ್ಪಷ್ಟಪಡಿಸಿದರು.

ಬಿಜೆಪಿ ಎಂಎಲ್‌ಸಿ ಕೇಶವ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, “ಬೆಂಗಳೂರು 28 ವಿಧಾನಸಭಾ ಕ್ಷೇತ್ರಗಳಲ್ಲಿ 33 ಪ್ಯಾಕೇಜ್‌ಗಳಿಗೆ ಕಸ ವಿಲೇವಾರಿ ಟೆಂಡರ್‌ಗಳನ್ನು ಕರೆದಿದ್ದೇವೆ. ನಾಲ್ಕು ಕೇಂದ್ರಗಳಲ್ಲಿ ಕಸದಿಂದ ಅನಿಲ ಮತ್ತು ವಿದ್ಯುತ್ ಉತ್ಪಾದನೆ ಯೋಜನೆ ಇದೆ. ನೈಸ್‌ಗೆ ಸೇರಿದ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿದ್ದೇವೆ. ದೊಡ್ಡಬಳ್ಳಾಪುರ ಹತ್ತಿರ ತ್ಯಾಜ್ಯ ಯಾರ್ಡ್‌ಗೆ ಸಚಿವ ಸಂಪುಟ ಅನುಮೋದನೆ ದೊರೆತಿದೆ. ಸುಧಾರಿತ ತಂತ್ರಜ್ಞಾನಗಳ ಅಧ್ಯಯನ ನಡೆಯುತ್ತಿದೆ” ಎಂದು ವಿವರಿಸಿದರು.

“ಬೆಂಗಳೂರಿನ ಕಸ ಮಾಫಿಯಾವನ್ನು ಮುರಿಯುವುದು ಸುಲಭವಲ್ಲ. ಹಿಂದಿನ ಬಿಜೆಪಿ ಸರ್ಕಾರವು 98 ವಾರ್ಡ್‌ಗಳಿಗೆ ಟೆಂಡರ್ ಕರೆಯಲು ಅವಕಾಶ ನೀಡಲಿಲ್ಲ. ನಾನು ಕೂಡ ಇದಕ್ಕೆ ವಿರುದ್ಧ ಹೋರಾಟ ಮಾಡುತ್ತಿದ್ದೇನೆ. ದೆಹಲಿ, ಹೈದರಾಬಾದ್, ಚೆನ್ನೈ ತ್ಯಾಜ್ಯ ನಿರ್ವಹಣಾ ಮಾದರಿಗಳನ್ನು ಅಧ್ಯಯನ ಮಾಡಲಾಗಿದೆ” ಎಂದರು.

“2016ರಲ್ಲಿ ಕೇಂದ್ರ ಆದೇಶದಂತೆ 2020ರಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಕಸ ಸೆಸ್ ಜಾರಿಗೆ ತಂದಿತ್ತು. ಆದರೆ ಆ ಅಧಿಸೂಚನೆಯಲ್ಲಿ ಅತಿಯಾದ ತೆರಿಗೆ ನಿಗದಿಯಾಗಿದ್ದರಿಂದ, ನಾವು ಕೇವಲ 25% ತೆರಿಗೆಯನ್ನು ಮಾತ್ರ ಸಂಗ್ರಹಿಸುತ್ತಿದ್ದೇವೆ” ಎಂದು ಹೇಳಿದರು.

“ಖಾಲಿ ನಿವೇಶನಗಳ ನಿರ್ವಹಣೆಗೆ ಹೊಸ ಕಾನೂನು ತರಲಾಗುತ್ತಿದೆ. ನಾಗರಿಕರು ತಾವು ಉತ್ಪಾದಿಸುವ ಕಸದ ಪ್ರಮಾಣವನ್ನು ಸ್ವಯಂ ಘೋಷಿಸಬಹುದಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸ ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ. ನಗರದಲ್ಲಿ ಸಿಸಿಟಿವಿ ಅಳವಡಿಕೆಗೂ ಈಗಾಗಲೇ ಟೆಂಡರ್ ಕರೆದಿದ್ದೇವೆ” ಎಂದು ಉಪಮುಖ್ಯಮಂತ್ರಿ ಹೇಳಿದರು.

Related posts