ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಧಮ್ಕಿ; ಬಿಜೆಪಿ ಆಕ್ರೋಶ

ಬೆಂಗಳೂರು: ಭದ್ರಾವತಿಯಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ಶಾಸಕ ಸಂಗಮೇಶ್ ಪುತ್ರ ಧಮ್ಕಿ ಹಾಕಿದ್ದಾರೆ ಎನ್ನಲಾದ ಘಟನೆ ಬಗ್ಗೆ ಬಿಜೆಪಿ ನಾಯಕ ಆರ್.ಅಶೋಕ್ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಅಶೋಕ್, ಕಾಂಗ್ರೆಸ್‌ ಶಾಸಕರಿಗೆ ಬೇರೆ ಆದಾಯವಿಲ್ಲ. ಆದ್ದರಿಂದ ವರ್ಗಾವಣೆ, ಮರಳು ಮಾಫಿಯಾ ಮೂಲಕ ಹಣ ಸಂಪಾದಿಸುತ್ತಿದ್ದಾರೆ. ಭದ್ರಾವತಿಯಲ್ಲೂ ಇಂಥದ್ದೇ ಘಟನೆ ನಡೆದಿದೆ ಎಂದಿದ್ದಾರೆ.

ಬೇರೆ ಜಿಲ್ಲೆಗಳಲ್ಲೂ ಅಧಿಕಾರಿಗಳಿಗೆ ಕಾಂಗ್ರೆಸ್‌ ಶಾಸಕರಿಂದ ಬೆದರಿಕೆ ಇದೆ. ಮಂಡ್ಯ, ಬೀದರ್‌, ಯಾದಗಿರಿ ಮೊದಲಾದ ಕಡೆ ಮರಳು ಮಾಫಿಯಾ ನಡೆಯುತ್ತಿದೆ. ಭದ್ರಾವತಿಯ ಮಹಿಳಾ ಅಧಿಕಾರಿ ರೆಕಾರ್ಡ್‌ ಮಾಡಿಕೊಂಡು ಧೈರ್ಯವಾಗಿ ಹೇಳಿದ್ದಾರೆ. ಉಳಿದ ಜಿಲ್ಲೆಗಳ ಅಧಿಕಾರಿಗಳು ವರ್ಗಾವಣೆ ಭಯದಿಂದ ಸುಮ್ಮನಾಗಿದ್ದಾರೆ ಎಂದರು.

ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನ್ನು ಉಲ್ಲಂಘಿಸಿ ಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ. ಜೊತೆಗೆ ಅಲ್ಲಿನ ವ್ಯವಸ್ಥೆಗೆ ಉತ್ತರ ಪ್ರದೇಶ ಸರ್ಕಾರವನ್ನು ಶ್ಲಾಘಿಸಿದ್ದಾರೆ. ಖರ್ಗೆಯವರದ್ದು ನಿಜವಾದ ಕಾಂಗ್ರೆಸ್ಸಾ ಅಥವಾ ಡಿ.ಕೆ.ಶಿವಕುಮಾರ್‌ ಅವರದ್ದು ನಿಜವಾದ ಕಾಂಗ್ರೆಸ್ಸಾ ಎಂದು ಅವರೇ ಹೇಳಬೇಕು. ಇಲ್ಲಿ ಯಾರನ್ನು ನಂಬಬೇಕು ಹಾಗೂ ಅನುಸರಿಸಬೇಕೆಂದು ಕಾಂಗ್ರೆಸ್‌ ಕಾರ್ಯಕರ್ತರಲ್ಲಿ ಗೊಂದಲ ಕಾಡುತ್ತಿದೆ ಎಂದು ಅಶೋಕ್ ವ್ಯಂಗ್ಯವಾಡಿದರು.

Related posts