ಬೆಂಗಳೂರು: ರಾಜ್ಯವನ್ನು ಗೂಂಡಾರಾಜ್ಯವನ್ನಾಗಿ ಪರಿವರ್ತಿಸಿರುವ ಈ ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಶಿಡ್ಲಘಟ್ಟದಲ್ಲಿ ಮಹಿಳಾ ಅಧಿಕಾರಿಗೆ ಕಾಂಗ್ರೆಸ್ ನಾಯಕ ಧಮ್ಕಿ ಹಾಕಿರುವ ಘಟನೆಯನ್ನು ವಿಜಯೇಂದ್ರ ಖಂಡಿಸಿದ್ದಾರೆ. ಕಾಂಗ್ರೆಸ್ ಮುಖಂಡರುಗಳು ಇದಕ್ಕೆ ತಕ್ಕಂತೆ ಪುಡಿರೌಡಿಗಳಂತೆ ವರ್ತಿಸುತ್ತಿರುವುದು ಆ ಪಕ್ಷದ ಸಂಸ್ಕೃತಿಗೆ ಕನ್ನಡಿ ಹಿಡಿದಿದೆ. ಶಿಡ್ಲಘಟ್ಟದ ಕಾಂಗ್ರೆಸ್ ಮುಖಂಡ ನಿಯಮಬಾಹಿರವಾಗಿ ಕೃತ್ಯ ಎಸಗಿರುವುದು ಮಾತ್ರವಲ್ಲದೆ ಒಬ್ಬ ಕರ್ತವ್ಯ ನಿರತ ಮಹಿಳಾ ಅಧಿಕಾರಿಯ ಮೇಲೆ ಹೀಗೆ ಅಸಭ್ಯ ಪುಂಡನಂತೆ ವರ್ತಿಸುತ್ತಿರುವುದು ಅಕ್ಷಮ್ಯ.
‘ಈ ಮುಖಂಡನ ಈ ‘ಗೂಂಡಾ ವರ್ತನೆ’ಗೂ ಕೂಡ ಬಳ್ಳಾರಿಯ ಪ್ರಕರಣದಲ್ಲಿ ವಹಿಸಿದಂತೆ ಇದಕ್ಕೂ ನಿಮ್ಮ ‘ಮೌನ’ ಸಮ್ಮತಿ ಇದೆಯೇ? ಅಥವಾ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆದೇಶಿಸುತ್ತೀರಾ?’ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಪರಮೇಶ್ವರ್ ಅವರನ್ನು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಅಧಿಕಾರ ಮದದಿಂದ ಜನಸಾಮಾನ್ಯರ, ಪ್ರಾಮಾಣಿಕ ಅಧಿಕಾರಿಗಳ ಮೇಲೆ ದರ್ಪ ತೋರಿಸುವುದನ್ನು ನೋಡಿಕೊಂಡು ಪಕ್ಷ ಸುಮ್ಮನಿರಲಾಗದು. ಒಬ್ಬ ಮಹಿಳಾ ಅಧಿಕಾರಿ ವಿರುದ್ಧ ದಬ್ಬಾಳಿಕೆ ನಡೆಸುವ ಇಂತಹ ಅಶಿಸ್ತಿನ ನಾಯಕರ ವಿರುದ್ಧ ರಾಜ್ಯ ಸರ್ಕಾರ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಜನರೇ ರಸ್ತೆಗಿಳಿದು ತಕ್ಕ ಪಾಠ ಕಲಿಸಲಿದ್ದಾರೆ ಎಂದವರು ನೀಡಿದ್ದಾರೆ.
