ಬೆಂಗಳೂರು: ವಿಧಾನಸಭಾ ಚುನಾವಣೆಯಲ್ಲಿ ಸೋಲುಂಡಿರುವ ಬಿಜೆಪಿಯಲ್ಲೀಗ ಆರೋಪ ಪ್ರತ್ಯಾರೋಪಗಳು ತಾರಕಕ್ಕೇರಿದೆ. ತಮ್ಮ ಪಕ್ಷದ ನಾಯಕರ ವಿರುದ್ಧವೇ ವಾಗ್ದಾಳಿ ನಡೆಸಿರುವ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ, ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಾರಣ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೋಲಿನ ಬಳಿಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು ಎಂದು ವಾಗ್ದಾಳಿ ನಡೆಸಿದರು. ವಿಧಾನಸಭಾ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಯಡಿಯೂರಪ್ಪ, ಬಿಎಸ್ವೈ, ವಿಜಯೇಂದ್ರ ಅವರು ಸಾಂತ್ವನ ಹೇಳಿದ್ದಾರೆ. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಯಾರಿಗಾದರೂ ಕರೆ ಮಾಡಿದ್ರಾ? ಎಂದು ಪ್ರಶ್ನಿಸಿದರು. ಬಿಜೆಪಿ ಪಕ್ಷದ ಕಚೇರಿಯನ್ನು ಕೆಲವರು ಕಾರ್ಪೊರೇಟ್ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಅವರು ಕುಟುಕಿದ ವೈಖರಿಯೂ ಅಚ್ಚರಿಗೆ ಕಾರಣವಾಗಿದೆ.
ಗ್ರಾಮ ಪಂಚಾಯಿತಿ ಗೆಲ್ಲದವರು ನಮಗೆ ಮಾರ್ಗದರ್ಶನ ಮಾಡುತ್ತಾರೆ. ಅಣ್ಣಾಮಲೈ ಬಂದು ನಮಗೆ ಮಾರ್ಗದರ್ಶನ ಕೊಡುತ್ತಾರೆ ಎಂದರಲ್ಲದೆ, ಅಣ್ಣಾಮಲೈ ದೊಡ್ಡ ಹೀರೋ ನಾ? ಎಂದು ಪ್ರಶ್ನಿಸಿದ್ದಾರೆ. ಇದು ನನ್ನ ಮಾತುಗಳಲ್ಲ, ಕಾರ್ಯಕರ್ತರ ಭಾವನೆಗಳು ಎಂದು ರೇಣುಕಾಚಾರ್ಯ ಹೇಳಿದ ಮಾತಿನ ದಾಟಿ ಕೂಡಾ ಬಿಜೆಪಿಯೊಳಗಿನ ನಾಯಕರ ಆಕ್ರೋಶದ ಪ್ರತಿಧ್ವನಿಯಂತಿತ್ತು.