ರಾಜ್ಯ ಸರ್ಕಾರ ಆರ್.ಎಸ್.ಎಸ್ ನಿಷೇಧ ಮಾಡಿಲ್ಲ; ಸಿಎಂ ಸ್ಪಷ್ಟನೆ

ಮಂಗಳೂರು: ರಾಜ್ಯ ಸರ್ಕಾರ ಆರ್.ಎಸ್.ಎಸ್ ನಿಷೇಧ ಮಾಡಿಲ್ಲ. ಶಾಲಾ – ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ ಆರ್.ಎಸ್.ಎಸ್ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಪುತ್ತೂರಿನಲ್ಲಿ ಶಾಸಕ ಅಶೋಕ್ ರೈ ಸಾರಥ್ಯದ ರೈ ಎಸ್ಟೇಟ್ ಎಜುಕೇಷನಲ್ ಮತ್ತು ಚಾರಿಟೇಬಲ್ ಟ್ರಸ್ಟ್‌ ಆಯೋಜಿಸಿದ್ದ ‘ಅಶೋಕ ಜನ – ಮನ 2025’ ಕಾರ್ಯಕ್ರಮ ಉದ್ಘಾಟಿಸಿದ ಸಿದ್ದರಾಮಯ್ಯ, ಆಶಿಕ್ ರೈ ಅವರ ಜನಪರ ಸೇವೆಯನ್ನು ಕೊಡಾಡಿದರು.

ಈ ಸಂದರ್ಭದಲ್ಲಿ RSS ನಿಷೇಧ ಕುರಿತ ಬಿಜೆಪಿ ನಾಯಕರ ಹೇಳಿಕೆಗಳಿಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಶಾಲಾ – ಕಾಲೇಜು ಆವರಣದಲ್ಲಿ ಸಂಘ ಸಂಸ್ಥೆಗಳು ಅನುಮತಿ ಪಡೆಯಬೇಕೆಂದು ಹೊರಡಿಸಿರುವ ಆದೇಶದಲ್ಲಿ ಆರ್.ಎಸ್.ಎಸ್ ಎಂದು ಎಲ್ಲಿಯೂ ಉಲ್ಲೇಖವಾಗಿಲ್ಲ ಎಂದರು. ಆದೇಶದಲ್ಲಿ ಯಾವುದೇ ನಿರ್ದಿಷ್ಟ ಸಂಘ ಅಥವಾ ಸಂಸ್ಥೆ ಎಂದು ಇಲ್ಲ. ಬಿಜೆಪಿ ಸರ್ಕಾರ ಆದೇಶ ಮಾಡಿದ್ದನ್ನೇ ನಾವು ಪುನರುಚ್ಚರಿಸಿದ್ದೇವೆ. ಅವರು ಮಾಡಬಹುದು, ನಾವು ಮಾಡಬಾರದೇ? ಎಂದು ಪ್ರಶ್ನಿಸಿದರು.

2013ರಲ್ಲಿ ಜಗದೀಶ ಶೆಟ್ಟರ್ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಂಘ ಸಂಸ್ಥೆಗಳು ಶಾಲಾ ಕಾಲೇಜು ಆವರಣದಲ್ಲಿ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದನ್ನು ನಿಷೇಧಿಸಿದ್ದರು. ಜಗದೀಶ್ ಶೆಟ್ಟರ್ ಅವರು ಶಿಕ್ಷಣ ಇಲಾಖೆ ಆದೇಶ ಮಾಡಿತ್ತು ನಾನಲ್ಲ ಎಂದಿದ್ದಾರೆ. ಇವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿಯೇ ಆದೇಶ ಹೊರಡಿಸಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಘ ಸಂಸ್ಥೆಗಳಿಗೆ ಅನುಮತಿ ಕೊಡಲೇಬೇಕು ಎಂದು ಏನಿಲ್ಲ. ಶಾಂತಿ ಸುವ್ಯವಸ್ಥೆ ಮೇಲೆ ಬೀರುವ ಪರಿಣಾಮವನ್ನು ಯೋಚಿಸಿ ಅನುಮತಿ ನೀಡುವುದು, ಬಿಡುವುದು ಅವಲಂಬಿತವಾಗಿದೆ ಏನೂ ಅವರು ಸ್ಪಷ್ಟಪಡಿಸಿದರು.

Related posts