ನವದೆಹಲಿ: ಜಿಎಸ್ಟಿ ದರ ಪರಿಷ್ಕರಣೆ ಹಿನ್ನೆಲೆಯಲ್ಲಿ ಉಂಟಾದ ಗೊಂದಲಕ್ಕೆ ತೆರೆ ಎಳೆದು, ಸೆಪ್ಟೆಂಬರ್ 22 ರ ಮೊದಲು ತಯಾರಿಸಿದ ಮಾರಾಟವಾಗದ ಸರಕುಗಳ ಮೇಲೆ ಹೊಸ ಬೆಲೆ ಸ್ಟಿಕ್ಕರ್ ಅಂಟಿಸುವ ಅಗತ್ಯವಿಲ್ಲವೆಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಈ ನಿರ್ಧಾರದಿಂದ ತಯಾರಕರಿಗೆ ದೊಡ್ಡ ಮಟ್ಟದ ನೆಮ್ಮದಿ ದೊರೆತಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ತೂಕ ಮತ್ತು ಅಳತೆ ಘಟಕದಿಂದ ಸೆಪ್ಟೆಂಬರ್ 18 ರಂದು ಹೊರಡಿಸಿದ ಅಧಿಸೂಚನೆಯಲ್ಲಿ, “ತಯಾರಕರು, ಪ್ಯಾಕರ್ಗಳು ಅಥವಾ ಆಮದುದಾರರು ಬಯಸಿದರೆ ಮಾತ್ರ ಸ್ವಯಂಪ್ರೇರಣೆಯಿಂದ ಪರಿಷ್ಕೃತ ಬೆಲೆ ಸ್ಟಿಕ್ಕರ್ ಅಂಟಿಸಬಹುದು. ಆದರೆ ಪ್ಯಾಕೇಜ್ನಲ್ಲಿರುವ ಮೂಲ ಬೆಲೆ ಘೋಷಣೆಗೆ ಅದು ಅಡ್ಡಿಯಾಗಬಾರದು” ಎಂದು ತಿಳಿಸಲಾಗಿದೆ.
ಇದರ ಮೂಲಕ ಕೈಗಾರಿಕಾ ಸಂಘಟನೆಗಳು ಮತ್ತು ವ್ಯಾಪಾರಿಗಳಿಂದ ಬಂದ ದೂರುಗಳನ್ನು ಸರ್ಕಾರ ಪರಿಗಣಿಸಿದೆ. ಹಳೆಯ ಮಾರ್ಗಸೂಚಿಗಳಿಂದ ಉಂಟಾಗುತ್ತಿದ್ದ ಅನುಸರಣೆ ಸವಾಲುಗಳನ್ನು ಹೀಗಾಗಿ ದೂರ ಮಾಡಲಾಗಿದೆ.
ಹಿಂದಿನ ನಿಯಮ ಪ್ರಕಾರ, ಕಂಪನಿಗಳು ಬೆಲೆ ಬದಲಾವಣೆಗಳನ್ನು ಎರಡು ಪತ್ರಿಕೆಗಳಲ್ಲಿ ಜಾಹೀರಾತು ನೀಡಬೇಕಿತ್ತು. ಆದರೆ, ಹೊಸ ಸಡಿಲಿಕೆಯಿಂದ ತಯಾರಕರು ಇದೀಗ ಸಗಟು ಹಾಗೂ ಚಿಲ್ಲರೆ ವ್ಯಾಪಾರಿಗಳಿಗೆ ನೇರವಾಗಿ ತಿಳಿಸಿದರೆ ಸಾಕು. ಪ್ರತಿಗಳನ್ನು ಕೇಂದ್ರ ಕಾನೂನು ಮಾಪನಶಾಸ್ತ್ರ ನಿರ್ದೇಶಕರು ಮತ್ತು ರಾಜ್ಯಗಳ ನಿಯಂತ್ರಕರಿಗೆ ಕಳುಹಿಸಬೇಕಾಗುತ್ತದೆ.
ಇದಲ್ಲದೆ, ಹಳೆಯ MRP ಮುದ್ರಿಸಿರುವ ಪ್ಯಾಕೇಜಿಂಗ್ ವಸ್ತುಗಳನ್ನು ಮಾರ್ಚ್ 31, 2026 ರವರೆಗೆ ಅಥವಾ ಸ್ಟಾಕ್ ಮುಗಿಯುವವರೆಗೆ ಬಳಸಲು ಅನುಮತಿ ನೀಡಲಾಗಿದೆ. ಚಿಲ್ಲರೆ ಬೆಲೆ ತಿದ್ದುಪಡಿಗೆ ಸ್ಟ್ಯಾಂಪಿಂಗ್, ಸ್ಟಿಕ್ಕರ್ ಅಥವಾ ಆನ್ಲೈನ್ ಮುದ್ರಣವನ್ನು ಬಳಸಬಹುದು.
ಈ ಕ್ರಮವನ್ನು ಆಲ್ ಇಂಡಿಯಾ ಮೆಡಿಕಲ್ ಡಿವೈಸ್ ಇಂಡಸ್ಟ್ರಿ ಅಸೋಸಿಯೇಷನ್ (AiMeD) ಸ್ವಾಗತಿಸಿದ್ದು, ವೇದಿಕೆ ಸಂಯೋಜಕ ರಾಜೀವ್ ನಾಥ್, “ಈ ಸ್ಪಷ್ಟತೆ ಸಕಾಲಿಕ. ಇಲ್ಲದಿದ್ದರೆ ಕಾರ್ಖಾನೆಗಳಿಂದ ಸರಕು ರವಾನೆ ನಿಂತುಹೋಗುವ ಆತಂಕವಿತ್ತು” ಎಂದು ಪ್ರತಿಕ್ರಿಯಿಸಿದ್ದಾರೆ.