ಅಮರಾವತಿ: ಕರ್ನಾಟಕದಲ್ಲಿರುವ ಹೆಚ್ಎಎಲ್ ಸಂಸ್ಥೆಯನ್ನು ತಮ್ಮ ರಾಜ್ಯಕ್ಕೆ ಸ್ಥಳಾಂತರಿಸುವಂತೆ ತಾನು ಬೇಡಿಕೆ ಇಟ್ಟಿಲ್ಲ ಎಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ಪಷ್ಟಪಡಿಸಿದ್ದಾರೆ.
ಚಂದ್ರಬಾಬು ನಾಯ್ಡು ಅವರ ಬೇಡಿಕೆ ಕುರಿತಂತೆ ಕರ್ನಾಟಕದ ನಾಯಕರ ಆಕ್ಷೇಪಗಳು ವ್ಯಕ್ತವಾದ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಚಂದ್ರಬಾಬು ನಾಯ್ಡು, ಹೆಚ್ಎಎಲ್ ವಿಮಾನ ನಿರ್ಮಾಣ ಘಟಕವನ್ನು ತಮ್ಮ ರಾಜ್ಯಕ್ಕೆ ಕೊಂಡೊಯ್ಯಲು ಆಂಧ್ರ ಸರ್ಕಾರ ದೆಹಲಿ ಮಟ್ಟದಲ್ಲಿ ಭಾರೀ ಲಾಬಿ ನಡೆಸಿದೆ ಎಂಬ ವರದಿವರದಿಯನ್ನು ಅಲ್ಲಗಳೆದಿದ್ದಾರೆ. ಅಂತಹ ಯಾವುದೇ ಯತ್ನ ನಡೆದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಯಾವುದೇ ಯೋಜನೆಯನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸ್ಥಳಾಂತರಿಸಲು ಎಂದಿಗೂ ಪ್ರಯತ್ನಿಸಿಲ್ಲ, ಅಂತಹ ಕಲ್ಪನೆ ನನ್ನ ಇತಿಹಾಸದ ಭಾಗವಲ್ಲ ಎಂದ ಅವರು, ಆಂಧ್ರಪ್ರದೇಶದಲ್ಲಿ ರಕ್ಷಣಾ ಉತ್ಪಾದನಾ ಕೇಂದ್ರವನ್ನು ಸ್ಥಾಪಿಸಬೇಕೆಂಬ ಆಶಯ ನಮ್ಮದೇ ಹೊರತು, ಇತರ ರಾಜ್ಯಗಳಿಂದ ಅಸ್ತಿತ್ವದಲ್ಲಿರುವ ಸೌಲಭ್ಯಗಳನ್ನು ಸ್ಥಳಾಂತರಿಸುವುದು ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.