ನವದೆಹಲಿ: ಮುಡಾ ನಿವೇಶನ ಹಂಚಿಕೆ ಆರೋಪ ಕುರಿತಂತೆ ಜಾರಿ ನಿರ್ದೇಶನಾಲಯ ತನಿಖೆ ಕುರಿತಂತೆ ಸುಪ್ರೀಂ ಕೋರ್ಟ್ ನೀಡಿರುವ ಆದೇಶವನ್ನು ಎಐಸಿಸಿ ಪ್ರಧಾನ ಕಾರ್ಯದರ್ಶಿ, ಪ್ರದೇಶ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸ್ವಾಗತಿಸಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವ ಅವರು, ಕರ್ನಾಟಕ ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರ ವಿರುದ್ಧ ಬಿಜೆಪಿ ಸುಳ್ಳು ಆರೋಪಗಳನ್ನು ಹುಟ್ಟುಹಾಕಿತ್ತು. ಜನಪ್ರಿಯ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮುಡಾ ಎಂಬ ಸುಳ್ಳು ಆರೋಪ ಮುಂದಿಟ್ಟುಕೊಂಡು ಬಿಜೆಪಿಯು ತಿಂಗಳುಗಟ್ಟಲೆ ಪ್ರತಿಭಟನೆ ನಡೆಸಿತ್ತು ಎಂದು ಟೀಕಿಸಿದ್ದಾರೆ.
ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಮತ್ತು ಅವರ ಪತ್ನಿ ವಿರುದ್ಧ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿತ್ತು. ಅಲ್ಲದೇ ಜಾರಿ ನಿರ್ದೇಶನಾಲಯವನ್ನು (ಇಡಿ) ಸಿದ್ದರಾಮಯ್ಯ ಹಾಗೂ ಅವರ ಪತ್ನಿ ವಿರುದ್ಧ ಛೂ ಬಿಟ್ಟಿತ್ತು. ಸಿದ್ದರಾಮಯ್ಯ ಹಾಗೂ ಅವರ ಪತ್ನಿ ವಿರುದ್ಧ ದುರುದ್ದೇಶಪೂರ್ವಕವಾಗಿ ಸುಳ್ಳು ಆರೋಪ ಮಾಡಿ ಕಿರುಕುಳ ನೀಡಲು ಯತ್ನಿಸಿತ್ತು ಎಂದು ಗಮನಸೆಳೆದಿದ್ದಾರೆ.
ಆದರೆ, ಸುಪ್ರೀಂ ಕೋರ್ಟ್ ಇಡಿ-ಬಿಜೆಪಿಯ ಪಾಲುದಾರಿಕೆಯ ಸುಳ್ಳು ಹಾಗೂ ದುರುದ್ದೇಶದ ಅಪ ಪ್ರಚಾರವನ್ನು ತಿರಸ್ಕರಿಸಿದ್ದು, ಅವರ ಅರ್ಜಿಯನ್ನು ರದ್ದುಗೊಳಿಸಿದೆ. ಹಿಂದೆ ಹೈಕೋರ್ಟ್ ನೀಡಿದ್ದ ನ್ಯಾಯಯುತ ತೀರ್ಪನ್ನು ಎತ್ತಿ ಹಿಡಿದಿದೆ ಎಂದು ಸುರ್ಜೆವಾಲ ಪ್ರತಿಕ್ರಿಯಿಸಿದ್ದಾರೆ.