ಇಸ್ರೇಲ್–ಪ್ಯಾಲೆಸ್ಟೀನ್ ಸಂಘರ್ಷ; ಹಮಾಸ್ ವಿರುದ್ಧ ಇಸ್ರೇಲ್ ಸೇಡು

ಗಾಜಾ: ಪಶ್ಚಿಮ ದಂಡೆಯಲ್ಲಿ ಮತ್ತೆ ಉದ್ವಿಗ್ನತೆ ಹೆಚ್ಚಾಗಿದ್ದು, ಇಸ್ರೇಲ್–ಪ್ಯಾಲೆಸ್ಟೀನ್ ನಡುವಿನ ಸಂಘರ್ಷ ಮತ್ತೊಮ್ಮೆ ತೀವ್ರಗೊಂಡಿದೆ. ರಫಾದಲ್ಲಿ ಇಬ್ಬರು ಇಸ್ರೇಲಿ ಸೈನಿಕರು ಹತ್ಯೆಯಾದ ನಂತರ, ಇಸ್ರೇಲ್ ಸೇನೆ ಹಮಾಸ್ ನೆಲೆಗಳ ಮೇಲೆ ತೀವ್ರ ವಾಯುದಾಳಿ ನಡೆಸಿದೆ. ಈ ದಾಳಿಗಳಲ್ಲಿ ಕನಿಷ್ಠ 45 ಮಂದಿ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ವಾರಗಳ ಹಿಂದಷ್ಟೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಜಾರಿಗೆ ಬಂದಿದ್ದರೂ, ರಫಾದ ಘಟನೆ ನಂತರ ಪರಿಸ್ಥಿತಿ ಮತ್ತೆ ಪ್ರಕ್ಷುಬ್ಧಗೊಂಡಿದೆ.

ಭಾನುವಾರ ಇಸ್ರೇಲಿ ರಕ್ಷಣಾ ಪಡೆ (ಐಡಿಎಫ್) ಗಾಜಾದಲ್ಲಿ ಸರಣಿ ವಾಯುದಾಳಿಗಳನ್ನು ನಡೆಸಿದ್ದು, ಹಲವು ಕಟ್ಟಡಗಳು ಧ್ವಂಸಗೊಂಡಿವೆ. ಸ್ಥಳೀಯ ಮೂಲಗಳ ಪ್ರಕಾರ, ಸಾವನ್ನಪ್ಪಿದವರಲ್ಲಿ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ ಹಲವು ಪ್ಯಾಲೆಸ್ಟೀನಿಯರು ಇದ್ದಾರೆ.

ಇಸ್ರೇಲಿ ಸೈನ್ಯವು ಹಮಾಸ್ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿಕೊಂಡು ಡಜನ್ಗಟ್ಟಲೆ ದಾಳಿಗಳನ್ನು ನಡೆಸಿದೆಯೆಂದು ಹೇಳಿದೆ. ಆದರೆ, ಪ್ಯಾಲೆಸ್ಟೀನ್ ಮೂಲಗಳು ಈ ದಾಳಿಗಳು ಸಾಮಾನ್ಯ ನಾಗರಿಕರನ್ನು ಗುರಿಯಾಗಿಸಿಕೊಂಡಿವೆ ಎಂದು ಆರೋಪಿಸಿವೆ.

Related posts