ಬೆಂಗಳೂರು: ಕೇಂದ್ರದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಎನ್‍ಡಿಎ ಸರಕಾರ ‘ಒಂದು ದೇಶ, ಒಂದು ಚುನಾವಣೆ’ ಸಂಬಂಧ ಒಂದು ಸಮರ್ಥ ನಿರ್ಧಾರ ಮಾತ್ರವಲ್ಲದೆ, ಐತಿಹಾಸಿಕ ತೀರ್ಮಾನ ಮಾಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕರಾದ ಬಿ.ವೈ.ವಿಜಯೇಂದ್ರ ಮೆಚ್ಚುಗೆ ಸೂಚಿಸಿದ್ದಾರೆ.
ಮಾಧ್ಯಮಗಳಿಗೆ ಇಂದು ಹೇಳಿಕೆ ಬಿಡುಗಡೆ ಮಾಡಿದ ಅವರು, ದೇಶದ ಹಿತಾಸಕ್ತಿಯ ಪ್ರಮುಖ ಉದ್ದೇಶ ಇದರ ಹಿಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 1951, 1967 ರಲ್ಲಿ ಏಕಕಾಲಕ್ಕೆ ಚುನಾವಣೆ ನಡೆದಿತ್ತು. ಕಾನೂನು ಆಯೋಗವು 1999ರ ತನ್ನ 170ನೇ ವರದಿಯಲ್ಲಿ ಐದು ವರ್ಷಗಳಿಗೆ ಒಮ್ಮೆ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಚುನಾವಣೆ ನಡೆಸುವ ಕುರಿತು ತಿಳಿಸಿತ್ತು ಎಂದು ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ನೇತೃತ್ವದ ಉನ್ನತ ಮಟ್ಟದ ಸಮಿತಿ ನೀಡಿದ ವರದಿಯಲ್ಲಿರುವ ಅಂಶಗಳ ಕುರಿತು ಅವರು ಗಮನ ಸೆಳೆದಿದ್ದಾರೆ.
ಮೊದಲ ಹಂತದಲ್ಲಿ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸುವುದು ಮತ್ತು ಈ ಸಾರ್ವತ್ರಿಕ ಚುನಾವಣೆ ನಡೆದ 100 ದಿನಗಳ ಒಳಗೆ ಎರಡನೇ ಹಂತದಲ್ಲಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್, ಗ್ರಾಮ ಪಂಚಾಯತ್, ಪುರಸಭೆ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸುವ ಉದ್ದೇಶವಿದೆ. ಇದು ಅತ್ಯಂತ ಸ್ವಾಗತಾರ್ಹ ಕ್ರಮ ಎಂದು ವಿವರಿಸಿದ್ದಾರೆ. ಇದಕ್ಕೆ ಒಂದೇ ಮತದಾರರ ಪಟ್ಟಿ ಬಳಕೆಗೆ ಅವಕಾಶವಿದೆ ಎಂದು ತಿಳಿಸಿದ್ದಾರೆ.
28 ರಾಜ್ಯಗಳು, 140 ಕೋಟಿ ಜನರನ್ನು ಹೊಂದಿರುವ ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು. ಭಾರತದಲ್ಲಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗೆ ಸಾಕಷ್ಟು ಹಣ ಖರ್ಚಾಗುತ್ತಿತ್ತು. ಸಾಕಷ್ಟು ಜನ ಸರಕಾರಿ ನೌಕರರ ಶ್ರಮ ವ್ಯಯ ಆಗುತ್ತಿತ್ತು ಎಂದಿದ್ದಾರೆ.