ಕಟ್ಟಡ ಕಾರ್ಮಿಕರ ಹೆಸರಲ್ಲಿ ಹಗಲುದರೋಡೆ; ಬಿಜೆಪಿ ಆರೋಪ

ಬೆಂಗಳೂರು: ಕಟ್ಟಡ ಕಾರ್ಮಿಕರ ಹೆಸರಲ್ಲಿ ಹಗಲುದರೋಡೆಗೆ ಇಳಿದಿರುವ ಸಚಿವ ಸಂತೋಷ್ ಲಾಡ್ ಅವರು ಮತ್ತೊಂದು ಲೂಟಿಗೆ ಮುಂದಾಗಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಆರೋಪಿಸಿದೆ.

ಶ್ರಮಿಕ ವಸತಿಸಹಿತ ಶಾಲೆಗಳ ನಿರ್ಮಾಣ ಕಾಮಗಾರಿ ಟೆಂಡ‌ರ್‌ನಲ್ಲಿ, ಟೆಂಡ‌ರ್ ಕರೆಯುವ ಮುನ್ನವೇ ಗುತ್ತಿಗೆದಾರರು ಹಾಗೂ ಉಪ ಗುತ್ತಿಗೆದಾರರೂ ನಿಗದಿಯಾಗಿದ್ದಾರೆ. ನಾಲ್ಕು ಪ್ಯಾಕೇಜ್ ಗುತ್ತಿಗೆ ಪೈಕಿ ಮೂರು ಅನ್ಯರಾಜ್ಯದ ಗುತ್ತಿಗೆದಾರರ ಪಾಲಾಗಿದೆ ಎಂದು ಬಿಜೆಪಿ ದೂರಿದೆ.

ಇರುವ ಸರ್ಕಾರಿ ಶಾಲೆಗಳೇ ಪ್ರಸ್ತುತ ಮುಚ್ಚುತ್ತಿರುವಾಗ ಅಂತಹ ಶಾಲೆಯೊಂದನ್ನು ಗುರುತಿಸಿ ಕಾರ್ಮಿಕ ಮಂಡಳಿ ವಸತಿ ಶಾಲೆ ಆರಂಭಿಸಬಹುದಿತ್ತು. ಆದರ ಬದಲು ಕಾರ್ಮಿಕ ಇಲಾಖೆ ಹೊಸದಾಗಿ 700-800 ಕೋಟಿ ರೂ. ವೆಚ್ಚ ಮಾಡುತ್ತಿರುವುದು, ಪ್ರಸ್ತುತ ನಡೆಯುತ್ತಿರುವ ಟೆಂಡರ್ ಪ್ರಕ್ರಿಯೆ ಗಮನಿಸುವಾಗ ಇದೊಂದು ಬಕಾಸುರ ಕಾರ್ಮಿಕ ಸಚಿವರ ಹೊಟ್ಟೆ ತುಂಬಿಸುವ ಯೋಜನೆ ಎಂಬುದು ಸ್ಪಷ್ಟವಾಗುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಬಿಜೆಪಿ ಹಾಕಿರುವ ಪೋಸ್ಟ್ ಗಮನಸೆಳೆದಿದೆ.

Related posts