ಬೆಂಗಳೂರು: ರಾಜ್ಯದ ಹಲವು ಭಾಗಗಳಲ್ಲಿ ಇಂದು (ಬುಧವಾರ) ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (India Meteorological Department) ನೀಡಿದೆ. ಕೆಲವು ಕಡೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ವಿಶೇಷವಾಗಿ ಮೈಸೂರು (Mysuru), ಮಂಡ್ಯ (Mandya), ಚಾಮರಾಜನಗರ (Chamarajanagar), ಹಾಸನ (Hassan), ಕೊಡಗು (Kodagu) ಹಾಗೂ ಚಿಕ್ಕಮಗಳೂರು (Chikkamagaluru) ಜಿಲ್ಲೆಗಳಲ್ಲಿ ಕೆಲವೆಡೆ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಇನ್ನೂ ಹಾವೇರಿ (Haveri), ಚಿತ್ರದುರ್ಗ (Chitradurga) ಹಾಗೂ ಹುಬ್ಬಳ್ಳಿ-ಧಾರವಾಡ (Hubballi-Dharwad) ಪ್ರದೇಶಗಳಲ್ಲಿಯೂ ಮಳೆಯ ಲಕ್ಷಣಗಳು ಗೋಚರಿಸಬಹುದು.
ಉತ್ತರ ಒಳನಾಡಿನ ಬೀದರ್ (Bidar), ಕಲಬುರಗಿ (Kalaburagi), ರಾಯಚೂರು (Raichur) ಜಿಲ್ಲೆಗಳಲ್ಲಿ ತೀವ್ರ ಬಿಸಿಲಿನ ನಡುವೆಯೂ ಗುಡುಗು ಸಹಿತ ಹಗುರ ಮಳೆಯಾಗುವ ಸಾಧ್ಯತೆ ಇದೆ.
ಬಂಗಾಳ ಕೊಲ್ಲಿ (Bay of Bengal)ಯಲ್ಲಿ ಉಂಟಾದ ವಾಯುಭಾರ ಕುಸಿತದ ಪರಿಣಾಮ ರಾಜ್ಯದ ಹವಾಮಾನದಲ್ಲಿ ಏರುಪೇರು ಕಾಣಿಸಿಕೊಂಡಿದೆ ಎಂದು ಹವಾಮಾನ ಇಲಾಖೆ ವಿವರಿಸಿದೆ.
ರಾಜ್ಯದಲ್ಲಿ ಗರಿಷ್ಠ ತಾಪಮಾನ 33°C ಮತ್ತು ಕನಿಷ್ಠ 21°C ಇರಲಿದ್ದು, ಬೆಂಗಳೂರಿನಲ್ಲಿ ಗರಿಷ್ಠ 32°C ಹಾಗೂ ಕನಿಷ್ಠ 19°C ತಾಪಮಾನ ದಾಖಲಾಗುವ ಸಾಧ್ಯತೆ ಇದೆ.
ರಾಜ್ಯದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಮುಂದುವರಿಯಲಿದ್ದು, ಹಗಲು ಬಿಸಿಲು ತೀವ್ರವಾಗಿದ್ದರೂ ಸಂಜೆ ವೇಳೆಗೆ ಆಕಾಶ ಮೋಡದಿಂದ ಆವರಿಸಿ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡು ಭಾಗದಲ್ಲಿ ತಾಪಮಾನ ಇತರ ಪ್ರದೇಶಗಳಿಗಿಂತ ಕಡಿಮೆ ಇರಲಿದೆ.

