ವಿಜಯಪುರ: ಮಾಜಿ ಸಿಎಂ ಯಡಿಯೂರಪ್ಪ ಅವರ ಬಂಡವಾಳ ಬಯಲು ಮಾಡುವುದಾಗಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಬೆದರಿಕೆ ಕಾರಣದಿಂದಾಗಿ ಬಿಜೆಪಿ ವಿಜಯೇಂದ್ರ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಲು ಹಿಂದೇಟು ಹಾಕಿದ್ದಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಶನಿವಾರ ಹೊಸ ಬಾಂಬ್ ಸಿಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡುತ್ತಾ ವಿಜಯೇಂದ್ರ ವಿರುದ್ಧ ಶನಿವಾರ ಟೀಕಾಸ್ತ್ರ ಪ್ರಯೋಗಿಸಿದ ಯತ್ನಾಳ್, ಕಲಬುರಗಿಯಲ್ಲಿ ನನ್ನ ವಿರುದ್ಧ ಪ್ರತಿಭಟನೆಗೆ ಬರಬೇಡಿ, ಬಂದರೆ ನಿಮ್ಮ ತಂದೆಯ ಬಂಡವಾಳ ಬಯಲು ಮಾಡುತ್ತೇನೆಂದು ವಿಜಯೇಂದ್ರಗೆ ಪ್ರಿಯಾಂಕ್ ಖರ್ಗೆ ಬೆದರಿಕೆ ಹಾಕಿದ್ದರು. ಇದೇ ಕಾರಣಕ್ಕಾಗಿ ವಿಜಯೇಂದ್ರ ಕಲಬುರಗಿಯಲ್ಲಿ ನಡೆದ ಪ್ರತಿಭಟನೆಗೆ ಹೋಗಿರಲಿಲ್ಲ ಎಂದರು.
ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ವಿಜಯೇಂದ್ರ ಹಿತೈಷಿಗಳೇ ಕಲಬುರಗಿಯಲ್ಲಿ ದೊಡ್ಡ ಮಟ್ಟದ ಹೋರಾಟ ಆಯೋಜಿಸಿದ್ದರು. ಆದರೂ ತಾನು ಹೋರಾಟಕ್ಕೆ ಏಕೆ ಹೋಗಲಿಲ್ಲ ಎಂದು ವಿಜಯೇಂದ್ರನೇ ಉತ್ತರಿಸಬೇಕು ಎಂದವರು ಹೇಳಿದರು.