ಕುಮಾರಸ್ವಾಮಿ ಎರಡು ಬಾರಿ ಸಿಎಂ ಆಗಿದ್ದಾರೆ. ಆದರೆ ಯಾವ ಸಾಧನೆ ಮಾಡಿದ್ದಾರೆ? ಡಿಕೆಶಿ ಪ್ರಶ್ನೆ

ಬೆಂಗಳೂರು: ಹೆಚ್.ಡಿ. ಕುಮಾರಸ್ವಾಮಿ ಅವರು ಎರಡು ಬಾರಿ ಸಿಎಂ ಆಗಿದ್ದಾರೆ. ಆದರೆ ಯಾವ ಸಾಧನೆ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದ್ದಾರೆ.

ಮಾಗಡಿಯಲ್ಲಿ ಕಾಂಗ್ರೆಸ್ ಪಕಗಷದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಜನರ ಬದುಕಿನಲ್ಲಿ ಬದಲಾವಣೆ ತಂದು ಜನ ಹಸಿವಿನಿಂದ ಮಲಗುವುದನ್ನು ತಪ್ಪಿಸಬೇಕೆಂಬ ಗುರಿ ಹೊಂದಿದೆ. ರೈತನಿಗೆ ಸಂಬಂಳ, ಪಿಂಚಣಿ, ಬಡ್ತಿ, ಲಂಚ ಯಾವುದೂ ಇಲ್ಲ. ಈ ರೈತನನ್ನು ಉಳಿಸಲು ನಾವು ಶ್ರಮಿಸಬೇಕು. ಹಾಲು ಉತ್ಪಾದಕರಿಗೆ ಕಾಂಗ್ರೆಸ್ ಸರ್ಕಾರ 5 ರೂ. ಪ್ರೋತ್ಸಾಹ ಧನ ನೀಡಿತ್ತು. ಆದರೆ ಈಗ ಹಸುಗಳ ಮೇವಿನ ಬೆಲೆ, ಗೊಬ್ಬರದ ಬೆಲೆ ಹೆಚ್ಚಾಗಿದೆ. ಆದರೆ ಹಾಲಿನ ದರ ಮಾತ್ರ ಏರಿಕೆಯಾಗಿಲ್ಲ ಎಂದರು.

ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿಯಾಗಿದ್ದಾರೆ. ಅವರ ಕಾಲದಲ್ಲಿ ಯಾವ ಸಾಧನೆ ಮಾಡಿದ್ದಾರೆ? ನಿಮ್ಮ ಬದುಕಿನಲ್ಲಿ ಯಾವ ಬದಲಾವಣೆ ತಂದಿದ್ದಾರೆ? ನಾನು ಇಂಧನ ಸಚಿವನಾಗಿದ್ದಾಗ ನಿಮಗೆ ಉಚಿತವಾಗಿ ಟ್ರಾನ್ಸ್ ಫಾರ್ಮರ್ ಕೊಟ್ಟು, 10 ಹೆಚ್ ಪಿ ವಿದ್ಯುತ್ ಕೊಟ್ಟೆವು. ಇಂದಿರಾ ಗಾಂಧಿ ಅವರ ಕಾಲದಲ್ಲಿ ಉಳುವವನಿಗೆ ಭೂಮಿ, ಬದರ್ ಪುಕ್ಕುಂ ಸಾಗುವಳಿ ನೀಡಿದ್ದೇವೆ. ಬ್ಯಾಂಕುಗಳ ರಾಷ್ಟ್ರೀಕರಣ, ಸ್ತ್ರೀ ಶಕ್ತಿ ಸಂಘಗಳ ಸಾಲದಂತಹ ಕಾರ್ಯಕ್ರಮ ನೀಡಿದ್ದೇವೆ ಎಂದರು‌.

ಮೋದಿ ಅವರು ಬಂದು ನನ್ನನ್ನು ಗೆಲ್ಲಿಸಿ ನಿಮ್ಮ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದರು. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದರು. ಅವರು ಹೇಳಿದಂತೆ ಏನಾದರೂ ಮಾಡಿದರಾ? ಇಲ್ಲ. ಹೀಗಾಗಿ ಜನರಿಗೆ ಅನುಕೂಲಕರ ಕಾರ್ಯಕ್ರಮ ನೀಡಲು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ನೀವೆಲ್ಲರೂ ನಂಬಿದ್ದೀರಿ. ಮರಕ್ಕೆ ಬೇರು ಎಷ್ಟು ಮುಖ್ಯವೋ, ಮನುಷ್ಯನಿಗೆ ನಂಬಿಕೆ ಅಷ್ಟೇ ಮುಖ್ಯ. ಬೇರು ಇಲ್ಲದಿದ್ದರೆ ಮರ ಉಳಿಯಲ್ಲ, ಅದೇ ರೀತಿ ನಂಬಿಕೆ ಇಲ್ಲದಿದ್ದರೆ ಸಂಬಂಧ ಉಳಿಯುವುದಿಲ್ಲ. ಹೀಗಾಗಿ ನಾವು ನಂಬಿಕೆ ಇಟ್ಟುಕೊಂಡು ಕೆಲಸ ಮಾಡಬೇಕು. ಕಾಂಗ್ರೆಸ್ ಪಕ್ಷ ನೆಹರೂ ಅವರ ಕಾಲದಿಂದಲೂ ನುಡಿದಂತೆ ನಡೆಯುತ್ತಾ ಬಂದಿದೆ ಎಂದವರು ಹೇಳಿದರು.

ಕಾಂಗ್ರೆಸ್ ಪಕ್ಷ ಜನರಿಗೆ ಅನುಕೂಲವಾಗಲು 3 ಗ್ಯಾರಂಟಿ ಯೋಜನೆ ಘೋಷಿಸಿದೆ. ಗೃಹಜ್ಯೋತಿ ಕಾರ್ಯಕ್ರಮದ ಮೂಲಕ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ನೀಡಲು ನಿರ್ಧರಿಸಿದ್ದು, ನೀವ್ಯಾರೂ ಕೂಡ ಕರೆಂಟ್ ಬಿಲ್ ಕಟ್ಟುವ ಅಗತ್ಯವಿಲ್ಲ. ಈ ಯೋಜನೆ ಮೂಲಕ ಪ್ರತಿ ತಿಂಗಳು 1500 ರೂಪಾಯಿಯಂತೆ ವರ್ಷಕ್ಕೆ 18 ಸಾವಿರ ರೂ. ಉಳಿತಾಯ ಮಾಡಬಹುದು. ಗೃಹಲಕ್ಷ್ಮಿ ಯೋಜನೆ ಮೂಲಕ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2000 ರೂ. ನಂತೆ ವರ್ಷಕ್ಕೆ 24 ಸಾವಿರ ರೂ. ಪ್ರೋತ್ಸಾಹ ಧನ ನೀಡಲು ಕಾಂಗ್ರೆಸ್ ಪಕ್ಷ ತೀರ್ಮಾನಿಸಿದೆ. ಈ ಎರಡು ಯೋಜನೆಗಳ ಮೂಲಕ ವರ್ಷಕ್ಕೆ 42 ಸಾವಿರದಂತೆ ಐದು ವರ್ಷಕ್ಕೆ 2.10 ಲಕ್ಷ ಆರ್ಥಿಕ ನೆರವು ನೀಡಲಾಗುವುದು. ಇನ್ನು ಅನ್ನಭಾಗ್ಯ ಯೋಜನೆ ಮೂಲಕ ಬಡ ಕುಟುಂಬಗಳ ಪ್ರತಿ ಸದಸ್ಯನಿಗೆ ಪ್ರತಿ ತಿಂಗಳು 10 ಕೆ.ಜಿ ಅಕ್ಕಿ ನೀಡುತ್ತೇವೆ. ಈ ಯೋಜನೆಗಳ ಕುರಿತು ನಾನು ಹಾಗೂ ಸಿದ್ದರಾಮಯ್ಯ ಅವರು ಗ್ಯಾರಂಟಿ ಕಾರ್ಡ್ ಗೆ ಸಹಿ ಮಾಡಿದ್ದು, ಈ ಕಾರ್ಡ್ ಅನ್ನು ನೀವು ಪ್ರತಿ ಮನೆ ಮನೆಗೆ ತಲುಪಿಸಬೇಕು ಎಂದವರು ಕಾರ್ಯಕರ್ತರಿಗೆ ಕರೆ ನೀಡಿದರು.

Related posts