ಬೆಂಗಳೂರು: ನಾಡಪ್ರಭು ಕೆಂಪೇಗೌಡರ ಕಂಚಿನ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ಮಾಜಿ ಪ್ರಧಾನಿ ದೇವೇಗೌಡರನ್ನು ಸರ್ಕಾರ ಆಹ್ವಾನಿಸದ ನಡೆ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ‘ಪ್ರಗತಿಯ ಪ್ರತಿಮೆ’ ಎಂದು ಹೆಸರಿಟ್ಟು ನಾಡಪ್ರಭು ಕೆಂಪೇಗೌಡರ ಪ್ರತಿಮೆಯನ್ನು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಸ್ಥಾಪಿಸಲಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ನ.11ರಂದು ಅನಾವರಣ ಮಾಡಿದ್ದರು. ಈ ಸಮಾರಂಭಕ್ಕೆ ದೇವೇಗೌಡರನ್ನು ಸರ್ಕಾರ ಕಡೆಗಣಿಸಿ ಅವಮಾನ ಮಾಡಿದೆ ಎಂಬುದು ಒಕ್ಕಲಿಗ ಸಮುದಾಯದ ಮುಖಂಡರ ಆಕ್ರೋಶ.
ಇದೇ ವೇಳೆ, ರಾಜ್ಯ ಸರ್ಕಾರದ ನಡೆ ಖಂಡಿಸಿ ಜೆಡಿಎಸ್ ಬೀದಿಗಿಳಿದಿದೆ. ದೇವನಹಳ್ಳಿ ಬಳಿ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಕೆಂಪೇಗೌಡರ ಪ್ರತಿಮೆ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಆಹ್ವಾನಿಸದ ರಾಜ್ಯ ಬಿಜೆಪಿ ಸರ್ಕಾರದ ನೀತಿ ವಿರೋಧಿಸಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ಕೆಂಪೇಗೌಡರ ಬೃಹತ್ ಪ್ರತಿಮೆ ಬಳಿ ಜಮಾಯಿಸಿದ ಜೆಡಿಎಸ್ ಕಾರ್ಯಕರ್ತರು ತಮ್ಮ ಆಕ್ರೋಶ ಹೊರಹಾಕಿದರು.
ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ವಿಧಾನ ಪರಿಷತ್ ಸದಸ್ಯ ಟಿ. ಎ. ಶರವಣ ಅವರು ಹಾಗೂ ಬೆಂಗಳೂರು ನಗರ ಜೆಡಿಎಸ್ ಅಧ್ಯಕ್ಷ ಆರ್. ಪ್ರಕಾಶ್ ಸೇರಿದಂತೆ ಹಲವು ಮುಖಂಡರು ಕಪ್ಪುಪಟ್ಟಿ ಧರಿಸಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.