ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ವು ನೌಕರರ ಸೇವಾ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವ ಉದ್ದೇಶದಿಂದ ‘ಸಾರಿಗೆ ಮಿತ್ರ’ HRMS ಮೊಬೈಲ್ ಆಪ್ (ಆವೃತ್ತಿ 2.0.0) ಅನ್ನು ಇಂದು ಬಿಡುಗಡೆ ಮಾಡಿದೆ. ಸಾರಿಗೆ ಹಾಗೂ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಆಪ್ ಅನ್ನು ಅಧಿಕೃತವಾಗಿ ಅನಾವರಣಗೊಳಿಸಿದರು.
ಡಿಜಿಟಲ್ ಪರಿವರ್ತನೆ, ಪಾರದರ್ಶಕತೆ ಮತ್ತು ಕಾರ್ಯಕ್ಷಮತೆ ವೃದ್ಧಿಯೊಂದಿಗೆ ನೌಕರರ ಕಲ್ಯಾಣಕ್ಕೆ ಹೆಚ್ಚಿನ ಒತ್ತು ನೀಡುವ ಉದ್ದೇಶದಿಂದ ಹೊಸ ವರ್ಷದ ಆರಂಭದಲ್ಲೇ ಈ ನವೀಕರಿತ ಆಪ್ ಬಿಡುಗಡೆ ಮಾಡಲಾಗಿದೆ ಎಂದು ಸಚಿವರು ಹೇಳಿದರು.
ಸ್ಮಾರ್ಟ್‌ಫೋನ್ ಮೂಲಕ ಮಾನವ ಸಂಪನ್ಮೂಲ ಸೇವೆಗಳನ್ನು ತ್ವರಿತವಾಗಿ ನೌಕರರಿಗೆ ಒದಗಿಸುವ ಉದ್ದೇಶದಿಂದ ಈ HRMS ಮೊಬೈಲ್ ಆಪ್ ಅಭಿವೃದ್ಧಿಪಡಿಸಲಾಗಿದೆ. ನೌಕರರಿಗೆ ಬೆರಳಂಚಿನಲ್ಲೇ ಸಮಗ್ರ ಮಾಹಿತಿ ಲಭ್ಯವಾಗುವಂತೆ ಹಲವು ಹೊಸ ವೈಶಿಷ್ಟ್ಯಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಪ್ರಮುಖ ವೈಶಿಷ್ಟ್ಯಗಳು
- ಜಿಯೋ–ಫೆನ್ಸಿಂಗ್ ಆಧಾರಿತ ಹಾಜರಾತಿ ವ್ಯವಸ್ಥೆ
- ಮಾಸಿಕ ಹಾಜರಾತಿ ವೀಕ್ಷಣೆ
- ವೈಯಕ್ತಿಕ ವಿವರಗಳು, ಸೇವಾ ದಾಖಲಾತಿ (ಸರ್ವಿಸ್ ರಿಜಿಸ್ಟರ್), ಕುಟುಂಬ ಸದಸ್ಯರು ಹಾಗೂ ನಾಮಿನಿ ವಿವರಗಳ ವೀಕ್ಷಣೆ
- ಮಾಸಿಕ ವೇತನಪಟ್ಟಿ (ಪೇ ಸ್ಲಿಪ್)ಗಳನ್ನು ಒಂದೇ ಕ್ಲಿಕ್‌ನಲ್ಲಿ ಡೌನ್‌ಲೋಡ್ ಮಾಡುವ ಸೌಲಭ್ಯ
- ರಜೆ ನಿರ್ವಹಣಾ ವ್ಯವಸ್ಥೆ ಮೂಲಕ ಲಭ್ಯವಿರುವ ರಜೆ ವಿವರಗಳ ಪರಿಶೀಲನೆ
- ನಿಗಮದ ವಿವಿಧ ವಿಭಾಗಗಳಿಂದ ಹೊರಡಿಸಲಾಗುವ ಸುತ್ತೋಲೆಗಳ ಮಾಹಿತಿಗೆ ಸುಲಭ ಪ್ರವೇಶ
ಈ ಆಪ್‌ನ ಮೂಲಕ ಆಂತರಿಕ ಸಂವಹನ ವ್ಯವಸ್ಥೆ ಮತ್ತಷ್ಟು ಬಲಗೊಳ್ಳಲಿದ್ದು, ನೌಕರರ ದಿನನಿತ್ಯದ ಆಡಳಿತಾತ್ಮಕ ಕಾರ್ಯಗಳು ಸುಲಭವಾಗಲಿವೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂಪಾಷ ಭಾ.ಆಸೆ, ನಿರ್ದೇಶಕಿ (ಸಿ & ಪಿ) ಡಾ. ನಂದಿನಿ ದೇವಿ ಸೇರಿದಂತೆ ನಿಗಮದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
