‘ಕೈ’ ಕಲಹದಿಂದ ಸಿದ್ದರಾಮಯ್ಯನವರಿಗೆ ಭ್ರಮನಿರಸನ: ಡಿವಿಎಸ್ 

ಬೆಂಗಳೂರು: ಪಕ್ಷದೊಳಗಿನ ಆಂತರಿಕ ಕಲಹದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭ್ರಮನಿರಸನಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಟೀಕಿಸಿದ್ದಾರೆ.

ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆಯು ಇಂದು ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿ.ವಿ.ಸದಾನಂದ ಗೌಡ, ನಾನು 30 ವರ್ಷಗಳಿಂದ ರಾಜಕಾರಣದಲ್ಲಿದ್ದೇನೆ. ಆಡಳಿತಕ್ಕೆ ಬಂದು 3 ತಿಂಗಳಲ್ಲಿ ಇಷ್ಟು ಜನವಿರೋಧಿ ಸರಕಾರವನ್ನು ಕರ್ನಾಟಕ ಮಾತ್ರವಲ್ಲದೆ ದೇಶದ ಯಾವುದೇ ರಾಜ್ಯದಲ್ಲಿ ನಾನು ಕಂಡಿಲ್ಲ ಎಂದರು. ‘ಅಂತೂ ಇಂತೂ ಕರ್ನಾಟಕದಲ್ಲಿ ಅತಿ ಶೀಘ್ರವಾಗಿ ಅವರ ಆಂತರಿಕ ಗೊಂದಲಗಳಿಂದಲೇ ಆಡಳಿತÀಕ್ಕೆ ಇತಿಶ್ರೀ ಆಗಲಿದೆ ಎಂಬ ಬಲವಾದ ನಂಬಿಕೆ ನನ್ನದು’ ಎಂದು ನುಡಿದರು.

ಸಿದ್ದರಾಮಯ್ಯನವರು 5 ವರ್ಷ ಸಿಎಂ ಆಗಿ ಅನುಭವ ಇರುವವರು. ಆದರೆ, ಅವರ ಆಡಳಿತಾನುಭವ ಎಲ್ಲಿ ಹೋಗಿದೆ ಎಂದು ಗೊತ್ತಾಗುತ್ತಿಲ್ಲ ಎಂದು ತಿಳಿಸಿದರು. ಪ್ರಾಯಶಃ ಹರಿಪ್ರಸಾದ್, ಡಿ.ಕೆ.ಶಿವಕುಮಾರ್, ರಾಯರೆಡ್ಡಿ, ಇನ್ನೂ ಹಲವಾರು ಜನ ಪಾಟೀಲರು ಸಿದ್ದರಾಮಯ್ಯರ ವಿರುದ್ಧ ಕಾಲ್ಕೆರೆದು ನಿಂತು ಜಗಳವಾಡುತ್ತಿದ್ದಾರೆ. ಇದರಿಂದ ಸಿದ್ದರಾಮಯ್ಯನವರು ಭ್ರಮನಿರಸನಗೊಂಡಿದ್ದಾರೆ ಎಂದು ತಿಳಿಸಿದರು.

ಸಿದ್ದರಾಮಯ್ಯರಿಗೆ ಈ ಪರಿಸ್ಥಿತಿ ಬರಬಾರದಿತ್ತು ಎಂಬಂತಾಗಿದೆ. ಇದು ರಾಜ್ಯದ ಹಿತಾಸಕ್ತಿಗೆ ಪೂರಕವಲ್ಲ; ಒಳ್ಳೆಯ ಆಡಳಿತ ಕೊಡಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು. ಪ್ರಶ್ನೆಗೆ ಉತ್ತರಿಸಿದ ಅವರು, ಉಚಿತ ಭಾಗ್ಯಗಳು ಸರಕಾರದ ಖಜಾನೆ ಲೂಟಿಗೆ ಕಾರಣವಾಗಿವೆ. ಎಸ್‍ಸಿಎಸ್‍ಟಿ ಮೀಸಲು ಹಣದಿಂದ 11 ಸಾವಿರ ಕೋಟಿಗೂ ಹೆಚ್ಚು ಹಣವನ್ನು ಅಹಿಂದ ಎನ್ನುತ್ತಿದ್ದ ಸಿದ್ದರಾಮಯ್ಯರ ಸರಕಾರ ಬೇರೆಡೆಗೆ ವರ್ಗಾಯಿಸಿದೆ ಎಂದರೆ, ಅದು ಅವರ ನೀತಿಗೆ ವಿರುದ್ಧವಾದ ನಡೆ ಎಂದು ಟೀಕಿಸಿದರು.

ಬಿಜೆಪಿ- ಜೆಡಿಎಸ್ ಮೈತ್ರಿ ವಿಚಾರದಲ್ಲಿ ಕೇಂದ್ರ ನಾಯಕತ್ವವು ನಿರ್ಧಾರ ತೆಗೆದುಕೊಳ್ಳಲಿದೆ. ಇದರ ಕುರಿತು ನಾವೇನೂ ಮಾತನಾಡುವಂಥದ್ದಿಲ್ಲ ಎಂದು ಅವರು ಈ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟರು. ಕರ್ನಾಟಕದ ವಿದ್ಯಮಾನವನ್ನು ಗಮನಿಸಿ ಕೇಂದ್ರದ ನಾಯಕರು ಲೋಖಸಭಾ ಚುನಾವಣೆಗೆ ಬೇಕಾದ ಕಾರ್ಯತಂತ್ರದ ಕುರಿತು ಆಲೋಚಿಸಿದ್ದಾರೆ. ಅದರ ಆಧಾರದಲ್ಲಿ ಅವರು ಮುಂದುವರೆಯುತ್ತಾರೆ ಎಂದರು. ಅದರ ಕುರಿತು ನಾವಿಲ್ಲಿ ಕುಳಿತು ಕಾಮೆಂಟ್ ಮಾಡುವುದು ಸರಿಯಲ್ಲ ಎಂದು ನುಡಿದರು.

Related posts