ಬೆಂಗಳೂರು: ಮಾಜಿ ಸಚಿವ, ಮಾಜಿ ವಿಧಾನ ಪರಿಷತ್ ಸದಸ್ಯ ಬಾಬುರಾವ್ ಚಿಂಚನಸೂರು ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ.
ಸದಾಶಿವನಗರ ನಿವಾಸದಲ್ಲಿ ಚಿಂಚನಸೂರು ಅವರಿಗೆ ಪಕ್ಷದ ಶಾಲು ಹಾಕುವ ಮೂಲಕ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಬರ ಮಾಡಿಕೊಳ್ಳಲಾಯಿತು. ಈ ಸಂದರ್ಭದಲ್ಲಿ ಕೆಪಿಸಿಸಿ ಉಪಾಧ್ಯಕ್ಷರಾದ ಶರಣು ಪ್ರಕಾಶ್ ಪಾಟೀಲ್ ಅವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ‘ಈಗಾಗಲೇ ಹಳ್ಳಿಗಳಿಂದ ರಾಜ್ಯ ಮಟ್ಟದವರೆಗೆ ನೂರಾರು ಅನ್ಯ ಪಕ್ಷಗಳ ನಾಯಕರು ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ಕೆಲ ದಿನಗಳ ಹಿಂದೆ ವಿಧಾನ ಪರಿಷತ್ ಸದಸ್ಯರಾಗಿ ನಾಲ್ಕೂವರೆ ವರ್ಷಗಳ ಕಾಲ ಅಧಿಕಾರ ಇದ್ದರೂ ಪುಟ್ಟಣ್ಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈಗ ಮಾಜಿ ಸಚಿವರಾದ ಬಾಬುರಾವ್ ಚಿಂಚನಸೂರು ಅವರು ಪರಿಷತ್ ಸದಸ್ಯರಾಗಿ ಒಂದೂವರೆ ವರ್ಷಗಳ ಕಾಲ ಅಧಿಕಾರ ಬಾಕಿ ಇದ್ದರೂ, ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ. ನಾನು ಅವರು ಜತೆಯಲ್ಲಿ ಅನೇಕ ಬಾರಿ ಮಂತ್ರಿಯಾಗಿ ಕೆಲಸ ಮಾಡಿದ್ದೇವೆ ಎಂದರು.
ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಡವರ ಕಲ್ಯಾಣವಾಗಿ, ಅವರ ಜೀವನ ಭದ್ರಾವಾಗಲಿದೆ. ಈ ಸಮಾಜಕ್ಕೆ ನ್ಯಾಯ ಸಿಗಲಿದೆ ಎಂದು ನಂಬಿಕೆ ಇಟ್ಟು, ಮಲ್ಲಿಕಾರ್ಜುನ ಖರ್ಗೆ ಅವರ ಮೇಲೆ ವಿಶ್ವಾಸ ಇಟ್ಟು, ಅವರ ಅನುಯಾಯಿಯಾಗಿ ಪಕ್ಷ ಸೇರುತ್ತಿದ್ದಾರೆ. ಅವರ ರಾಜೀನಾಮೆ ನಿನ್ನೆ ಅಂಗೀಕಾರವಾಗಿದ್ದು, ಇಂದು ಹೊಸ ವರ್ಷದ ಹೊಸ ದಿನ ಆರಂಭವಾಗಲಿ ಎಂದು ಪಕ್ಷಕ್ಕೆ ಸೇರುತ್ತಿದ್ದಾರೆ. ನಾಳೆ ಪಕ್ಷ ಸೇರ್ಪಡೆ ಕಾರ್ಯಕ್ರಮ ಇಟ್ಟುಕೊಳ್ಳಬೇಕು ಎಂದು ಭಾವಿಸಿದ್ದೆವು. ಪ್ರಿಯಾಂಕ್ ಖರ್ಗೆ ಅವರು ಊರಿನಲ್ಲಿ ಇಲ್ಲ. ಈ ಸಂದರ್ಭದಲ್ಲಿ ಒಂದು ದಿನವೂ ವ್ಯರ್ಥ ಮಾಡುವುದು ಬೇಡ ಎಂದು ಈ ಶುಭದಿನ ಪಕ್ಷಕ್ಕೆ ಸೇರುತ್ತಿದ್ದಾರೆ. ಪಕ್ಷದ ಎಲ್ಲ ನಾಯಕರ ಜತೆ ಚರ್ಚೆ ಮಾಡಿ ಅವರನ್ನು ಬಹಳ ಸಂತೋಷದಿಂದ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ’ ಎಂದು ತಿಳಿಸಿದರು.
‘ನಾಡಿನ ಜನರಿಗೆ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು. ಹೊಸ ವರ್ಷ ಹೊಸ ಆಯಾಮ, ಹೊಸ ಬದಲಾವಣೆ. ದೇವರು ವರ ಹಾಗೂ ಶಾಪ ನೀಡುವುದಿಲ್ಲ. ಕೇವಲ ಅವಕಾಶ ಮಾತ್ರ ನೀಡುತ್ತಾನೆ. ಈಗ ರಾಜ್ಯದಲ್ಲಿ ಬದಲಾವಣೆ ತರಲು ದೇವರು ಒಂದು ಅವಕಾಶ ಕಲ್ಪಿಸಿದ್ದಾನೆ. ನಾವು ರಾಜ್ಯದ ಜನರಿಗೆ ನಾಲ್ಕು ಗ್ಯಾರಂಟಿ ಯೋಜನೆಗಳನ್ನು ಪ್ರಕಟಿಸಿದ್ದು ನಾವು ನುಡಿದಂತೆ ನಡೆಯುತ್ತೇವೆ. ನಾವು ರಾಜ್ಯಾದ್ಯಂತ ಪ್ರಜಾಧ್ವನಿ ಯಾತ್ರೆ ಮಾಡುತ್ತಿದ್ದು, ನಮ್ಮ ನಿರೀಕ್ಷೆಗೂ ಮೀರಿ ಜನರಿಂದ ಬೆಂಬಲ ವ್ಯಕ್ತವಾಗುತ್ತಿದೆ’ ಎಂದು ತಿಳಿಸಿದರು.