ಮೈಸೂರು: ಬೆಂಬಲ ಬೆಲೆ ಯೋಜನೆಯಡಿ ಕೊಬ್ಬರಿ ಖರೀದಿಗೆ ಕೇಂದ್ರ ಸರ್ಕಾರ ಇನ್ನೆರಡು ದಿನಗಳಲ್ಲಿ ಅನುಮತಿ ನೀಡಲಿದೆ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನ ಬಂಡೀಪಾಳ್ಯದಲ್ಲಿನ ಎಪಿಎಂಸಿಯಲ್ಲಿ ತೆರೆಯಲಾಗಿರುವ ರಾಗಿ ಮತ್ತು ಭತ್ತ ಖರೀದಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದರು. ಕೇಂದ್ರ ಸರ್ಕಾರದಿಂದ ಅನುಮತಿ ಸಿಗುತ್ತಿದ್ದಂತೆ ಬೆಂಬಲ ಬೆಲೆ ನೀಡಿ ಕೊಬ್ಬರಿ ಖರೀದಿಸಲಾಗುವುದು. ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸುವುದಿಲ್ಲ. ಹೀಗಾಗಿ ಪ್ರತಿಭಟನೆ ಕೈಬಿಡಬೇಕು ಎಂದು ಹೇಳಿದರು. ಮಾರ್ಚ್ ವರೆಗೆ ರಾಗಿ ಮತ್ತು ಭತ್ತ ಖರೀದಿಸಲಾಗುತ್ತದೆ. ಕರ್ನಾಟಕದಲ್ಲಿ ಹೆಚ್ಚುವರಿಯಾಗಿ ಉಳಿಯುವ ರಾಗಿ ಅಥವಾ ಭತ್ತವನ್ನು ತಮಿಳುನಾಡಿಗೆ ನೀಡಬಹುದು ಎಂದು ಕೇಂದ್ರ ಸರ್ಕಾರ ಕೂಡ ಹೇಳಿದೆ ಎಂದರು. 50 ಲಕ್ಷ ಟನ್ ರಾಗಿ ಮತ್ತು 50 ಲಕ್ಷ ಟನ್ ಭತ್ತ ಖರೀದಿ ಮಾಡಲಾಗುತ್ತದೆ. ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು ಮಾರ್ಚ್ 31ರವರೆಗೆ ಇರಲಿದೆ ಎಂದು ಹೇಳಿದರು.
ಶಾಸಕರಾದ ಜಿ.ಟಿ.ದೇವೇಗೌಡ, ಮೇಯರ್ ಶಿವಕುಮಾರ್, ಎಪಿಎಂಸಿ ಪ್ರಧಾನ ವ್ಯವಸ್ಥಾಪಕರಾದ ಚಂದ್ರಕಾಂತ ಪಾಟೀಲ್ ಸೇರಿದಂತೆ ಹಲವು ಗಣ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.