ಬೆಂಗಳೂರು: ‘ಗ್ಯಾರೆಂಟಿ’ ಭರವಸೆಗಳ ಜಾರಿಯ ಜೊತೆಯಲ್ಲೇ ಮೇಕೆದಾಟು, ಮಹದಾಯಿ ಯೋಜನೆ ಅನುಷ್ಠಾನಕ್ಕೆ ತಯಾರಿ ನಡೆದಿದೆ. ಈ ಸಂಬಂಧ ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಸಲಹೆ ನೀಡಿದ್ದಾರೆ.
ಅಧಿಕಾರಿಗಳೊಂದಿಗೆ ಮಂಗಳವಾರ ಸಭೆ ನಡೆಸಿರುವ ಅವರು, ಕೇಂದ್ರದಿಂದ ಕರ್ನಾಟಕದ ನೀರಾವರಿ ಯೋಜನೆಗಳಿಗೆ ಅನುಮತಿ ತರುವುದೇ ನಾನು ನಿಮಗೆ ನೀಡುತ್ತಿರುವ ಗುರಿ ಎಂದರು.
ಮೇಕೆದಾಟು, ಮಹದಾಯಿ ಯೋಜನೆಗಳನ್ನು ಆದ್ಯತೆ ಮೇರೆಗೆ ಅನುಷ್ಠಾನಕ್ಕೆ ತರಬೇಕು. ಅದಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಬೇಕು. ಜಲವಿವಾದ ಪರಿಹಾರ, ಬಾಕಿ ಯೋಜನೆಗಳ ಪೂರ್ಣ, ನೀರಾವರಿ ಯೋಜನೆಗಳಿಗೆ ಸಂಪನ್ಮೂಲ ಕ್ರೋಡೀಕರಣ, ಕೇಂದ್ರದಿಂದ ಅನುದಾನ ತರುವುದು, ಉದ್ಯೋಗ ಸೃಷ್ಟಿಗೆ ಒತ್ತು ಕೊಡಬೇಕು ಎಂದವರು ಅಧಿಕಾರಿಗಳಿಗೆ ತಿಳಿಸಿದರು.
ನೀರಾವರಿ ಯೋಜನೆಗಳಿಗೆ 5 ವರ್ಷದಲ್ಲಿ 2 ಲಕ್ಷ ಕೋಟಿ ರೂಪಾಯಿ ವಿನಿಯೋಗಿಸುತ್ತೇವೆ ಎಂದು ಮಾತು ಕೊಟ್ಟಿದ್ದೇವೆ. ಸರಕಾರ, ಸಂಸ್ಥೆಗಳು, ಕೇಂದ್ರದ ಅನುದಾನದ ಮೂಲಕ ಸಂಪನ್ಮೂಲ ಒಟ್ಟುಗೂಡಿಸಬೇಕು ಎಂದ ಡಿಕೆಶಿ, ಕೇಂದ್ರ ಸಚಿವ ಶೇಖಾವತ್ ಉತ್ತಮ ವ್ಯಕ್ತಿ. ರಾಜ್ಯದ ಕೆಲಸಗಳಿಗೆ ಅವರ ಸಹಕಾರ ಪಡೆಯೋಣ. ಬಾಕಿ ಯೋಜನೆಗಳಿಗೆ ಭೂಸ್ವಾಧೀನ ತ್ವರಿತಗತಿಯಲ್ಲಿ ಮಾಡಿ ಎಂದರು.
ಮೇಕೆದಾಟು ಯೋಜನೆಗೆ ಮೀಸಲಿಟ್ಟ 1000 ಕೋಟಿ ರೂಪಾಯಿ ಅನುದಾನವನ್ನು ಭೂಸ್ವಾಧೀನದಂತಹ ಪೂರ್ವಸಿದ್ಧತೆ ಕೆಲಸಗಳಿಗೆ ಬಹುದಿತ್ತು. ಮಾಡಿಲ್ಲ ಏಕೆ? ಹಾಗಾದರೆ ಹಣ ಇಟ್ಟಿದ್ದಾದರೂ ಏಕೆ? ಎಂದು ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.
ಬರೀ ಎಲ್ಒಸಿ, ಟೆಂಡರ್, ಗುತ್ತಿಗೆ ಹಂಚಿಕೆ, ಬಿಲ್ ಮಾಡೋ ಕೆಲಸಕ್ಕೆ ನಿಮ್ಮ ಶ್ರಮ ವಿನಿಯೋಗ ಆಗಬಾರದು ಎಂದ ಅವರು, ಭ್ರಷ್ಟಾಚಾರಕ್ಕೆ ಆಸ್ಪದವಿಲ್ಲ. ನಿಷ್ಠೆ, ಪ್ರಾಮಾಣಿಕತೆಗೆ ಮಾತ್ರ ಪ್ರೋತ್ಸಾಹ ಎಂದರು.