ಬೆಂಗಳೂರು: ರಾಜ್ಯ ಸಾರಿಗೆ ನಿಗಮಗಳಲ್ಲಿ ಯಾವುದೇ ಅಕ್ರಮ ಅವ್ಯವಹಾರ ಆಗಿಲ್ಲ ಎಂದು ಕೆಎಸ್ಸಾರ್ಟಿಸಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಕುರಿತಂತೆ ಮಾಧ್ಯಮಗಳಲ್ಲಿ ತಪ್ಪಾಗಿ ವರದಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಕೆಎಸ್ಸಾರ್ಟಿಸಿ, ಸಾರಿಗೆ ಸಂಸ್ಥೆಗಳ ನಿವೃತ್ತ ಸಿಬ್ಬಂದಿಗಳಿಗೆ ಗ್ರಾಚ್ಯಯಟಿ ಬಾಕಿ ಹಣ ನೀಡಬೇಕಾಗಿದೆ ಎಂದು ಒಪ್ಪಿಕೊಂಡಿದೆ. ಕೋವಿಡ್ ಹಿನ್ನಲೆಯಲ್ಲಿ ಆರ್ಥಿಕ ಸಮಸ್ಯೆ ಇದ್ದ ಕಾರಣ ನಿಗದಿತ ಆದಾಯ ಇಲ್ಲದೆ ಸಂಬಳ, ಡೀಸಲ್ ವೆಚ್ಚ ಸರಿದೂಗಿಸುವ ಸವಾಲಿತ್ತು. ಹಾಗಾಗಿ ಈ ಕೆಳಕಂಡಂತೆ ಸಂಸ್ಥೆವಾರು ಗ್ರಾಚ್ಯುಟಿ ಪಾವತಿ ಬಾಕಿ ಇದೆ ಎಂದು ನಿಗಮ ಹೇಳಿದೆ.
-
ಕೆ ಎಸ್ ಆರ್ ಟಿ ಸಿ: ರೂ 92.50 ಕೋಟಿ
-
ಬಿ ಎಂ ಟಿ ಸಿ: ರೂ. 99.02 ಕೋಟಿ
-
ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ: ರೂ. 33.00 ಕೋಟಿ
-
ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ: ರೂ.170.82 ಕೋಟಿ
-
ಒಟ್ಟು ರೂ. 395. 34 ಕೋಟಿ
ಈ ನಡುವೆ, ಗ್ರಾಚ್ಯುಟಿ ಸಂಬಂಧ ಸಿಬ್ಬಂದಿಯಿಂದ ಯಾವುದೇ ಹಣ ಕಡಿತವಾಗುವುದಿಲ್ಲ. ಇದು ಸಿಬ್ಬಂದಿಗಳಿಗೂ ತಿಳಿದ ವಿಷಯವಾಗಿದೆ. ಗ್ರಾಚ್ಯುಟಿ ಸಂಬಂಧಿಸಿದಂತೆ ಯಾವುದೇ ಹಣದ ಮೊತ್ತವನ್ನು ಶೇಖರಿಸಿ ಇಟ್ಟಿರುವುದಿಲ್ಲ , ದಿನನಿತ್ಯದ ಸಾರಿಗೆ ಆದಾಯದಲ್ಲಿಯೇ ಗ್ರಾಚ್ಯುಟಿ ಹಣವನ್ನು ಸಹ ಪಾವತಿಸುತ್ತಿರುವುದು. ಆದ್ದರಿಂದ ಗ್ರಾಚ್ಯುಟಿ ಹಣದಲ್ಲಿ ದುರುಪಯೋಗ, ಅಕ್ರಮ, ಅವ್ಯವಹಾರ ಮಾತೇ ಉದ್ಭವಿಸುವುದಿಲ್ಲ ಎಂದು ನಿಗಮ ಸ್ಪಷ್ಟಪಡಿಸಿದೆ.
ಸಿಬ್ಬಂದಿಯಿಂದ ಕಡಿತವೇ ಆಗದ ಹಣ ಮತ್ತು ಯಾವುದೇ ಮೊತ್ತವನ್ನು ಶೇಖರಿಸಿ ಇಟ್ಟಿರದೆ, ಇರುವ ಹಣದಿಂದ ಅಕ್ರಮವಾಗಲು ಹೇಗೆ ಸಾಧ್ಯ ಎಂದಿರುವ ನಿಗಮ, ಪ್ರಸ್ತುತ ಸಾರಿಗೆ ಸಂಸ್ಥೆಗಳ ಆರ್ಥಿಕ ಪರಿಸ್ಥಿತಿಯು ಚೇತರಿಕೆ ಹಂತದಲ್ಲಿದ್ದು, ಹಂತ ಹಂತವಾಗಿ ಬಾಕಿ ಮೊತ್ತವನ್ನು ಪಾವತಿಸಲಾಗುವುದೆಂದು ಭರವಸೆ ನೀಡಿದೆ.
ಇದೇ ವೇಳೆ, ನಿಗಮದ ಕಾರ್ಮಿಕರಿಗೆ ನೀಡಬೇಕಾಗಿರುವ ಯಾವುದೇ ಹಣವನ್ನು ಅವರಿಗೆ ನೀಡಬೇಕಾಗಿರುವುದು ಆದ್ಯ ಕರ್ತವ್ಯ ಮತ್ತು ಜವಾಬ್ದಾರಿಯಾಗಿದೆ. ಕೊವಿಡ್ ಕಾರಣದಿಂದಾಗಿ ವಿಳಂಬವಾಗಿದೆಯೇ ಹೊರತು ಅಕ್ರಮ ಅವ್ಯವಹಾರವಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.