ಬೆಂಗಳೂರು: ಚನ್ನಪಟ್ಟಣ ಉಪಚುನಾವಣೆಯಲ್ಲಿ ಎನ್ಡಿಎ ಅಭ್ಯರ್ಥಿ ಸ್ಪರ್ಧೆ ಮಾಡಲಿದ್ದಾರೆ. ಇದು ಜೆಡಿಎಸ್ನ ಕ್ಷೇತ್ರವೇ ಆಗಿದ್ದರಿಂದ ಅವರ ಸಲಹೆಯೇ ಪ್ರಮುಖ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಪಿ.ಯೋಗೇಶ್ವರ್ ಅವರ ಮನ ಒಲಿಸಲು ನಾನು ಕೂಡ ಯತ್ನಿಸಿದ್ದೆ. ಚನ್ನಪಟ್ಟಣ ಕ್ಷೇತ್ರದ ಟಿಕೆಟ್ ಸಂಬಂಧ ಇನ್ನೂ ಅಂತಿಮ ನಿರ್ಧಾರ ಆಗಿಲ್ಲ. ಯೋಗೇಶ್ವರ್ ಅವರಿಗೆ ಟಿಕೆಟ್ ನೀಡಬೇಕೆಂದು ಹಿರಿಯ ನಾಯಕರಿಗೆ ಮನವಿ ಮಾಡಿದ್ದೇವೆ. ಈ ಹಿಂದೆ ಕ್ಷೇತ್ರದಲ್ಲಿ ಎಚ್.ಡಿ.ಕುಮಾರಸ್ವಾಮಿ ಶಾಸಕರಾಗಿದ್ದು, ಅವರ ತೀರ್ಮಾನ ಪ್ರಮುಖವಾಗಿರುತ್ತದೆ. ಯೋಗೇಶ್ವರ್ ಅವರು ದುಡುಕುತ್ತಾರೆ ಅಥವಾ ತಪ್ಪು ತೀರ್ಮಾನ ಕೈಗೊಳ್ಳುತ್ತಾರೆಂದು ನನಗೆ ಅನ್ನಿಸುತ್ತಿಲ್ಲ. ಕ್ಷೇತ್ರದಲ್ಲಿ ಎನ್ಡಿಎ ಅಭ್ಯರ್ಥಿಗೆ ಟಿಕೆಟ್ ಸಿಗಬಹುದು ಎಂದರು.
ನಿಖಿಲ್ ಕುಮಾರಸ್ವಾಮಿ ಅವರು ಈಗಾಗಲೇ ಸ್ಪರ್ಧೆ ಮಾಡಲ್ಲ ಎಂದು ಹೇಳಿದ್ದಾರೆ. ಸೀಟು ಅವರದ್ದೇ ಆಗಿರುವುದರಿಂದ ಹಾಗೂ ಎನ್ಡಿಎ ಪಾರ್ಟ್ನರ್ ಆಗಿರುವುದರಿಂದ ಜೆಡಿಎಸ್ನವರ ಸಲಹೆ ಪ್ರಮುಖವಾಗಿರುತ್ತದೆ. ಇನ್ನು ಎರಡು ದಿನದಲ್ಲಿ ಎಲ್ಲವೂ ತೀರ್ಮಾನವಾಗಲಿದೆ ಎಂದರು.