ಚಮೋಲಿ ಮೇಘಸ್ಫೋಟ: ಅವಶೇಷಗಳಿಂದ ಹಲವರ ರಕ್ಷಣೆ

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ನಂದನಗರ ಬ್ಲಾಕ್‌ನಲ್ಲಿ ಭಾರೀ ಮಳೆ, ಭೂಕುಸಿತ ಹಾಗೂ ಮೇಘಸ್ಫೋಟದಿಂದ ಉಂಟಾದ ಅವಘಡದಲ್ಲಿ ಇಬ್ಬರನ್ನು ಪವಾಡಸದೃಶವಾಗಿ ಜೀವಂತವಾಗಿ ರಕ್ಷಿಸಲಾಗಿದೆ.

ಗುರುವಾರ ರಾತ್ರಿ ಸಂಭವಿಸಿದ ಈ ಘಟನೆ ಕಳೆದ 48 ಗಂಟೆಗಳಿಂದ ಜಿಲ್ಲೆಯ ಹಲವೆಡೆ ಮಳೆ-ಪ್ರವಾಹ ತೀವ್ರ ಹಾನಿ ಉಂಟುಮಾಡುತ್ತಿರುವ ಸಂದರ್ಭದಲ್ಲಿ ನಡೆದಿದೆ. ಸುಮಾರು 16 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದ ವ್ಯಕ್ತಿಯೊಬ್ಬರನ್ನು ಹಾಗೂ ಮಹಿಳೆಯೊಬ್ಬರನ್ನು ಸ್ಥಳೀಯರ ಸಹಕಾರದೊಂದಿಗೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ತಕ್ಷಣವೇ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಕುಂಟಾರಿ ಲಗಾಫಲಿ, ಸೆಂಟಿ ಲಗಾಫಲಿ, ಧುರ್ಮಾ ಮತ್ತು ಫಾಲಿ ಲಗಾಫಲಿ ಹಳ್ಳಿಗಳಲ್ಲಿ 30 ಕ್ಕೂ ಹೆಚ್ಚು ಮನೆಗಳು ಧ್ವಂಸಗೊಂಡಿದ್ದು, ಅನೇಕರ ಜೀವಗಳು ಅಪಾಯಕ್ಕೆ ಗುರಿಯಾಗಿವೆ. ಪ್ರಾಥಮಿಕ ಅಂಕಿಅಂಶಗಳ ಪ್ರಕಾರ, 14 ಜನರು ಅವಶೇಷಗಳಲ್ಲಿ ಸಿಲುಕಿರುವ ಶಂಕೆ ವ್ಯಕ್ತವಾಗಿದ್ದು, 20 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಶೋಧ ಮತ್ತು ರಕ್ಷಣಾ ತಂಡಗಳು 24 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿವೆ.

ಸೆಪ್ಟೆಂಬರ್ 18ರ ಮುಂಜಾನೆ 2 ಗಂಟೆ ಸುಮಾರಿಗೆ ಬಿನ್ಸಾರ್ ಪರ್ವತದ ಮೇಲೆ ಮೇಘಸ್ಫೋಟ ಸಂಭವಿಸಿದ್ದು, ಕುಂಟಾರಿ ಲಗಾಫಲಿ ಹಾಗೂ ಧುರ್ಮಾ ಹಳ್ಳಿಗಳಲ್ಲಿ ಅತಿದೊಡ್ಡ ಹಾನಿ ಉಂಟಾಗಿದೆ. ಕುಂಟಾರಿ ಲಗಾಫಲಿಯ ಎಂಟು ಮಂದಿ ಸೇರಿ ಹತ್ತು ಜನರು ಕಾಣೆಯಾಗಿದ್ದಾರೆ.

ಕಾಣೆಯಾದವರಲ್ಲಿ ಕುನ್ವರ್ ಸಿಂಗ್ (42), ಪತ್ನಿ ಕಾಂತಾ ದೇವಿ (38), ಮಕ್ಕಳಾದ ವಿಕಾಸ್ ಮತ್ತು ವಿಶಾಲ್ (10), ದೇವೇಶ್ವರಿ ದೇವಿ (65), ಭಾಗಾ ದೇವಿ (65), ಜಗದಾಂಬ ಪ್ರಸಾದ್ (70), ನರೇಂದ್ರ ಸಿಂಗ್ (40), ಧುರ್ಮಾ ಗ್ರಾಮದ ಗುಮನ್ ಸಿಂಗ್ (75) ಹಾಗೂ ಮಮತಾ ದೇವಿ (38) ಸೇರಿದ್ದಾರೆ.

ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘಟನೆಯ ಕುರಿತು ಕಳವಳ ವ್ಯಕ್ತಪಡಿಸಿದ್ದು, “ಸ್ಥಳೀಯ ಆಡಳಿತ, ಪೊಲೀಸರು ಹಾಗೂ ವಿಪತ್ತು ನಿರ್ವಹಣಾ ಪಡೆ ತಕ್ಷಣ ಸ್ಥಳಕ್ಕೆ ಧಾವಿಸಿದ್ದು, ಪರಿಹಾರ ಹಾಗೂ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಎಲ್ಲರ ಸುರಕ್ಷತೆಗಾಗಿ ದೇವರನ್ನು ಪ್ರಾರ್ಥಿಸುತ್ತೇನೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅವಶೇಷ ತೆರವುಗೊಳಿಸಲು ಜೆಸಿಬಿ ಹಾಗೂ ಇತರ ಯಂತ್ರೋಪಕರಣಗಳನ್ನು ಕಾರ್ಯಕ್ಕೆ ಇಳಿಸಲಾಗಿದ್ದು, ಶೋಧ ಕಾರ್ಯಾಚರಣೆ ಇನ್ನಷ್ಟು ವೇಗಗೊಳಿಸಲಾಗಿದೆ.

Related posts