ಜಾತಿಗಣತಿ ವರದಿ ಜಾರಿಯಾದರೆ ಯೋಜನೆಗಳನ್ನು ರೂಪಿಸಲು ಸಹಾಯ; ಪರಮೇಶ್ವರ್

ಬೆಂಗಳೂರು: ಜಾತಿಗಣತಿ ವರದಿಯನ್ನು ಜಾರಿಗೊಳಿಸಲು ಮುಂದಾಗಿರುವುದು ವಿಪಕ್ಷದವರಿಗೆ ನುಂಗಲಾರದ ತುತ್ತಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದಾರೆ ‌

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಜಾತಿಗಣತಿಯ ವರದಿಯನ್ನು ತರದೇ ಇದ್ದಾಗ ಕೋಲ್ಡ್ ಸ್ಟೋರೆಜ್‌ನಲ್ಲಿಟ್ಟುಬಿಟ್ಟರು ಎಂದು ಟೀಕಿಸುತ್ತಿದ್ದರು. ಯಾಕೆ ಅಷ್ಟೊಂದು ಹಣ ಖರ್ಚು ಮಾಡಿದರು. ಯಾಕೆ ಪೆಟ್ಟಿಗೆಯೊಳಗೆ ಇಡಬೇಕಿತ್ತು ಎಂದೆಲ್ಲ‌ ಪ್ರಶ್ನಿಸಿದರು. ಜನಸಮುದಾಯಕ್ಕೆ ಜಾರಿಗೊಳಿಸುತ್ತೇವೆ ಎಂದಾಗ ನುಂಗಲಾರದ ತುತ್ತಾಗಿದೆ. ರಾಜ್ಯದಲ್ಲಿ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ದಲಿತ ಸಮುದಾಯದ ಜನರು ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಹೇಳಿದರು.

ಜಾತಿಗಣತಿ ವರದಿಯ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ರೂಪಿಸಲು ಸಹಾಯವಾಗುತ್ತದೆ ಎಂದು ಎಲ್ಲರು ಹೇಳುತ್ತಿದ್ದಾರೆ. ಸಮುದಾಯಗಳಿಗೆ ಯೋಜನೆಗಳನ್ನು ನೀಡಬಾರದೇ? ಎಂದು ಅವರು ಪ್ರಶ್ನಿಸಿದರು.

ಯಾವ ಆಧಾರದ ಮೇಲೆ ಯೋಜನೆಗಳನ್ನು ಕೊಡಬೇಕು ಎಂಬ ಪ್ರಶ್ನೆ ಬಂದಾಗ ಸ್ವಾಭಾವಿಕವಾಗಿ ನಾವು ಜನಸಂಖ್ಯೆ ಆಧಾರವಾಗಿಟ್ಟುಕೊಂಡು ಕೊಡಬೇಕಾಗುತ್ತದೆ. ಅದಕ್ಕೋಸ್ಕರ ಜಾತಿಗಣತಿ ವರದಿ ಬಿಡುಗಡೆ ಮಾಡಬೇಕು. ಅಕ್ಟೋಬರ್ 18ರಂದು ಸಚಿವ ಸಂಪುಟದ ಮುಂದೆ ಚರ್ಚೆಗೆ ತರುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರೆ. ಉಪಸಮಿತಿ ರಚಿಸುವುದ ಅಥವಾ ಅಸೆಂಬ್ಲಿ ಮುಂದೆ ತೆಗೆದುಕೊಂಡು ಹೋಗುವುದ ಎಂಬುದನ್ನು ತೀರ್ಮಾನ ಮಾಡುತ್ತಾರೆ. ಇದರಲ್ಲಿ ಯಾರ ಬೆಂಬಲದ ಪ್ರಶ್ನೆ ಬರುವುದಿಲ್ಲ. ವಸ್ತುಸ್ಥಿತಿಯನ್ನು ಜನಗಳ ಮುಂದೆ ಇಡುತ್ತೇವೆ. ಅದನ್ನು ಬೇಡ ಅಂದರೆ ಹೇಗೆ? ರೂ. 160 ಕೋಟಿ ಖರ್ಚು ಮಾಡಿ, ಯಾವ ಸಮುದಾಯ ಎಷ್ಟು ಜನಸಂಖ್ಯೆ ಇದೆ ಎಂಬುದು ಗೊತ್ತಾಗಬೇಕು ಎಂದರು

ಕೇಂದ್ರ ಸರ್ಕಾರ ಜನಗಣತಿ ಮಾಡಬೇಕು ಎಂದು ನಿರ್ಧರಿಸಿದ್ದು, ಈಗಾಗಲೇ ತಡವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಚಿವರು ಪ್ರಧಾನಮಂತ್ರಿ ಭೇಟಿಗೆ ಹೋದಾಗ ಜನಗಣತಿ ಮಾಡುವುದಾಗಿ ಹೇಳಿದ್ದರು. 2026 ಅಥವಾ 2027ರಲ್ಲಿ ಪ್ರಾರಂಭಿಸಿ 2028 ಚುನಾವಣೆಗೆ ಸಿಗುತ್ತದೆ ಎಂದಿದ್ದರು. ಆ ಸಂದರ್ಭದಲ್ಲಿಯೂ ಇದೇರೀತಿ ವಿರೋಧಿಸುತ್ತಾರೆಯೇ? ಸರ್ಕಾರ ಅಧಿಕೃತವಾಗಿ ಜಾತಿಗಣತಿ ಮಾಡಿದೆ. ಯಾರೋ ನಾಲ್ಕು ಜನ ಸೇರಿ ಮಾಡಿರುವುದಲ್ಲ ಎಂದು ಹೇಳಿದರು.

ಪ್ರತಿ ಹತ್ತು ವರ್ಷಕ್ಕೊಮ್ಮೆ ಜನಗಣತಿ ನಡೆಯಬೇಕು. ಈಗ ಏರುಪೇರಾಗಿದೆ. ಹತ್ತುವರ್ಷಕ್ಕೆ ಶೇ.15ರಷ್ಟು ಜನಸಂಖ್ಯೆ ಹೆಚ್ಚಾಗಿರುತ್ತದೆ ಎಂದು ಅಧ್ಯಯನಗಳು ಹೇಳುತ್ತವೆ. ಇದರ ಆಧಾರದ ಮೇಲೆ ಮಾಡಬಹುದು‌ ಎಂದರು.

Related posts