‘ತಮ್ಮ ಮಗನ ಸ್ವೀಟ್ ಬ್ರದರ್‌ನನ್ನು ರಕ್ಷಿಸುತ್ತಿರುವುದು ಯಾರು?’: ಸ್ಯಾಂಟ್ರೋ ರವಿ‌ ಬಗ್ಗೆ ಸಿಎಂ ಬೊಮ್ಮಾಯಿಗೆ ಕಾಂಗ್ರೆಸ್ ಪ್ರಶ್ನೆ

ಬೆಂಗಳೂರು: ಸ್ಯಾಂಟ್ರೋ ರವಿ ಹೆರಿನ ಮೇಲೆಯೇ ಇದೀಗ ರಾಜ್ಯ ರಾಜಕಾರಣದಲ್ಲಿ ಜಟಾಪಟಿ ನಡೆದಿದೆ. ಸ್ಯಾಂಟ್ರೋ ಪ್ರಕರಣ ಮುಂದಿಟ್ಟು ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ ಮಾಡಿರುವ ಆರೋಪಗಳು ಆಡಳಿತಾರೂಢ ಬಿಜೆಪಿಗೆ ಮುಜುಗರದ ಸನ್ನಿವಶವನ್ನು ತಂದೊಡ್ಡಿದ್ದು, ಇದೀಗ ಕಾಂಗ್ರೆಸ್ ಕೂಡಾ ಬೊಮ್ಮಾಯಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ.

ಸ್ಯಾಂಟ್ರೋ ರವಿಯನ್ನು ಸರ್ಕಾರದ ಬ್ರೋಕರ್ ಎಂದು ಪ್ರತಿಪಕ್ಷ ಕಾಂಗ್ರೆಸ್ ಬಣ್ಣಿಸಿದೆ. ಈ ಕುರಿತಂತೆ ಟ್ವೀಟ್ ಮಾಡಿರುವ ಕಾಂಗ್ರೆಸ್, ‘ಸರ್ಕಾರದ ಚೀಫ್ ಬ್ರೋಕರ್ ಸ್ಯಾಂಟ್ರೋ ರವಿಯನ್ನು ಇನ್ನೂ ಬಂಧಿಸಲಾಗಿಲ್ಲ, ಪತ್ನಿಯ ದೂರಿನ ಹೊರತಾಗಿ ಬೇರೆ ದೂರು ದಾಖಲಾಗಿಲ್ಲ, ತನಿಖೆಗೆ ಮುಂದಾಗಿಲ್ಲ’ ಎಂದು ದೂರಿದೆ. ‘ತಮ್ಮ ಮಗನ ಸ್ವೀಟ್ ಬ್ರದರ್‌ನನ್ನು ರಕ್ಷಿಸುತ್ತಿರುವುದು ಯಾರು?’ ಎಂದು ಸಿಎಂ ಬೊಮ್ಮಾಯಿ ಅವರನ್ನು ಪ್ರಶ್ನಿಸಿರುವ ವೈಖರಿ ಕೂಡಾ ಅಚ್ಚರಿ ಹಾಗೂ ಕುತೂಹಲ ಕೆರಳುವಂತೆ ಮಾಡಿದೆ. ಆತನನ್ನು ಮುಟ್ಟಿದರೆ ‘ಸಿಡಿ ಕ್ರಾಂತಿ’ ಆಗಿಬಿಡುವ ಭಯವೇ? ಸರ್ಕಾರದ ಅಕ್ರಮಗಳು ಹೊರಬರುವ ಆತಂಕವೇ? ಎಂದೂ ಕಾಂಗ್ರೆಸ್ ಪ್ರಶ್ನಿಸಿದೆ.

ಸ್ಯಾಂಟ್ರೋ ರವಿಯನ್ನ ಪೊಲೀಸರು ಹುಡುಕುತ್ತಿದ್ದಾರಂತೆ! ಗೃಹ ಇಲಾಖೆಯ ವರ್ಗಾವಣೆಯ ಹೊಣೆ ಹೊತ್ತವನು ಪೊಲೀಸರ ಕೈಗೆ ಸಿಗುತ್ತಿಲ್ಲ ಎನ್ನುವುದು ಪರಮ ಹಾಸ್ಯವಲ್ಲವೇ!ಪೊಲೀಸರು ಆತನನ್ನು ಒಮ್ಮೆ ಗೃಹಸಚಿವರ ಮನೆಯಲ್ಲೊ, ಮುಖ್ಯಮಂತ್ರಿಗಳ ಮನೆಯಲ್ಲೋ ಹುಡುಕಿದರೆ ಸಿಗಬಹುದೇನೋ! ಎಂದು ಟ್ವೀಟ್ ಮಾಡಿರುವ ಕಾಂಗ್ರೆಸ್, ಸಿಡಿ ಸರ್ಕಾರದ ಸಂಪೂರ್ಣ ಜಾತಕ ಆತನ ಬಳಿ ಇರುವಾಗ ಆತನ ತನಿಖೆ ಸಾಧ್ಯವೇ? ಎಂದು ಪ್ರಶ್ನಿಸಿದೆ.

ಮುರುಗೇಶ್ ನಿರಾಣಿ ಸಿಡಿ ಇಟ್ಟುಕೊಂಡು ಬ್ಲಾಕ್ಮೇಲ್ ಮಾಡಿ ಮಂತ್ರಿಯಾಗಿದ್ದಾರೆ ಎಂದಿದ್ದಾರೆ ಯತ್ನಾಳ್.ಸಿಡಿಗಳಿಂದ, ಸಿಡಿಗಳಿಗಾಗಿ, ಸಿಡಿಗಳಿಗೋಸ್ಕರ ರಚನೆಯಾದ “ಸಿಡಿ ಸರ್ಕಾರ” ಎನ್ನುವುದು ಸ್ಪಷ್ಟವಾಗಿದೆ. ಸ್ಯಾಂಟೋ ರವಿಯೂ ಸಚಿವರುಗಳ ಸಿಡಿ ಇಟ್ಟುಕೊಂಡು ವರ್ಗಾವಣೆ ಮಾಡಿಸಿಕೊಳ್ಳುತ್ತಿದ್ದನೇ ಎಂದು ಪ್ರಶ್ನಿಸಿದೆ.

ಅಷ್ಟೇ ಅಲ್ಲ, ಸರ್ಕಾರದ “ಚೀಫ್ ಬ್ರೋಕರ್” ಸ್ಯಾಂಟ್ರೋ ರವಿಯ ದಂಧೆಗಳು, ಆತನ ಅಕ್ರಮಗಳ ಬಗ್ಗೆ ಪ್ರಾಮಾಣಿಕ ತನಿಖೆ ನಡೆದಿದ್ದೇ ಆದರೆ.. ಸಿಎಂ ರಾಜೀನಾಮೆ ಕೊಡಬೇಕಾದೀತು. ಗೃಹಸಚಿವರು ಕಾರಾಗೃಹ ಸೇರಬೇಕಾದೀತು. ಮುಕ್ಕಾಲು ಕ್ಯಾಬಿನೆಟ್ ಜೈಲು ಸೇರಬೇಕಾದೀತು. ಸರ್ಕಾರ ಪತನವಾಗುವುದು ನಿಶ್ಚಿತ ಎಂದಿದೆ. ಇಡೀ ಸರ್ಕಾರದ ಸಂಪೂರ್ಣ ಭ್ರಷ್ಟಾಚಾರದ ಜಾತಕ ಆತನ ಬಳಿ ಇದೆ ಎಂದೂ ವ್ಯಂಗ್ಯವಾಡಿದೆ.

 

Related posts