ನವದೆಹಲಿ: ಆರ್ಥಿಕ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಗುರಿಗಳನ್ನು ಸಾಧಿಸಲು ಪೀರ್ ಬೋಧನೆ(ಶಿಕ್ಷಕರಿಗೆ ಬದಲಾಗಿ ಮಕ್ಕಳ ನಡುವೆ ಬೋಧನೆ)ಯಂತಹ ನಾವೀನ್ಯತೆಗೆ ಆರ್ಥಿಕ ಸಮೀಕ್ಷೆ ಒತ್ತು ನೀಡಿದೆ.
ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಶುಕ್ರವಾರ 2024-25ರ ಆರ್ಥಿಕ ಸಮೀಕ್ಷೆ ಮಂಡಿಸಿದರು. ಶಿಕ್ಷಣ ಮತ್ತು ಮಾನವ ಬಂಡವಾಳ ಅಭಿವೃದ್ಧಿಯು ಅಭಿವೃದ್ಧಿಯ ಮೂಲಭೂತ ಆಧಾರಸ್ತಂಭಗಳಲ್ಲಿ ಸೇರಿವೆ, ರಾಷ್ಟ್ರೀಯ ಶಿಕ್ಷಣ ನೀತಿ-2020(ಎನ್ಇಪಿ) ಅನ್ನು ಈ ತತ್ವದ ಮೇಲೆ ನಿರ್ಮಿಸಲಾಗಿದೆ ಎಂದು ಈ ಸಮೀಕ್ಷೆ ಹೇಳಿದೆ.
ಭಾರತದ ಶಾಲಾ ಶಿಕ್ಷಣ ವ್ಯವಸ್ಥೆಯು 14.72 ಲಕ್ಷ ಶಾಲೆಗಳಲ್ಲಿ 98 ಲಕ್ಷ ಶಿಕ್ಷಕರನ್ನು ಹೊಂದಿದ್ದು, 24.8 ಕೋಟಿ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸುತ್ತಿದೆ ಎಂದು ಆರ್ಥಿಕ ಸಮೀಕ್ಷೆ ಎತ್ತಿ ತೋರಿಸಿದೆ(ಯುಡಿಐಎಸ್ಇ+ 2023-24). ಸರ್ಕಾರಿ ಶಾಲೆಗಳು ಒಟ್ಟು 69% ಪ್ರಮಾಣದಷ್ಟಿದ್ದು, 50% ವಿದ್ಯಾರ್ಥಿಗಳನ್ನು ದಾಖಲಿಸಿ 51% ಶಿಕ್ಷಕರನ್ನು ನೇಮಿಸಿಕೊಂಡಿವೆ. ಅದೇ ಖಾಸಗಿ ಶಾಲೆಗಳು 22.5%ರಷ್ಟಿದ್ದು, 32.6% ವಿದ್ಯಾರ್ಥಿಗಳನ್ನು ದಾಖಲಿಸಿಕೊಂಡು 38% ಶಿಕ್ಷಕರನ್ನು ನೇಮಿಸಿಕೊಂಡಿವೆ.
ಎನ್ಇಪಿ-2020 ನೀತಿಯು 2030ರ ವೇಳೆಗೆ 100% ಒಟ್ಟು ದಾಖಲಾತಿ ಅನುಪಾತ(ಜಿಇಆರ್) ಗುರಿ ಹೊಂದಿದೆ ಎಂದು ಸಮೀಕ್ಷೆ ಎತ್ತಿ ತೋರಿಸಿದೆ. ಪ್ರಾಥಮಿಕ ಹಂತದಲ್ಲಿ 93% ಜಿಇಆರ್ ಸಾರ್ವತ್ರಿಕವಾಗಿದೆ ಮತ್ತು ಮಾಧ್ಯಮಿಕ(77.4%) ಮತ್ತು ಉನ್ನತ ಮಾಧ್ಯಮಿಕ ಮಟ್ಟದಲ್ಲಿ(56.2%) ಅಂತರ ಕಡಿಮೆ ಮಾಡಲು ಪ್ರಯತ್ನಗಳು ನಡೆಯುತ್ತಿವೆ, ಇದು ರಾಷ್ಟ್ರವನ್ನು ಎಲ್ಲರಿಗೂ ಸಮಗ್ರ ಮತ್ತು ಸಮಾನ ಶಿಕ್ಷಣ ಒದಗಿಸುವ ದೃಷ್ಟಿಕೋನಕ್ಕೆ ಹತ್ತಿರವಾಗಿಸಲಿದೆ.
ಇತ್ತೀಚಿನ ವರ್ಷಗಳಲ್ಲಿ ಶಾಲೆ ತೊರೆಯು ಮಕ್ಕಳ ಪ್ರಮಾಣವು ಸ್ಥಿರವಾಗಿ ಕಡಿಮೆಯಾಗುತ್ತಿದೆ ಎಂದು ಸಮೀಕ್ಷೆ ಹೇಳಿದೆ, ಪ್ರಾಥಮಿಕ ಹಂತದಲ್ಲಿ ಶೇ.1.9, ಹಿರಿಯ ಪ್ರಾಥಮಿಕ ಹಂತದಲ್ಲಿ ಶೇ.5.2 ಮತ್ತು ಮಾಧ್ಯಮಿಕ ಹಂತದಲ್ಲಿ ಶೇ.14.1ಕ್ಕೆ ತಗ್ಗಿದೆ.
ನೈರ್ಮಲ್ಯ ಮತ್ತು ಮಾಹಿತಿ ಮತ್ತು ಸಂವಹನ ತಂತ್ರಜ್ಞಾನಗಳ(ಐಸಿಟಿ) ಲಭ್ಯತೆ ಸೇರಿದಂತೆ ಮೂಲಭೂತ ಸೌಲಭ್ಯಗಳಲ್ಲಿನ ಸುಧಾರಣೆಗಳು ಗಮನಾರ್ಹವಾಗಿವೆ, ಇದು ಶಾಲಾ ಮೂಲಸೌಕರ್ಯ ಅಭಿವೃದ್ಧಿಯಲ್ಲಿ ಸಕಾರಾತ್ಮಕ ಪ್ರವೃತ್ತಿಯನ್ನು ಪ್ರತಿಬಿಂಬಿಸುತ್ತದೆ. ಯುಡಿಐಎಸ್ಇ+ 2023-24 ವರದಿ ಪ್ರಕಾರ, ಕಂಪ್ಯೂಟರ್ ಹೊಂದಿರುವ ಶಾಲೆಗಳ ಶೇಕಡಾವಾರು ಪ್ರಮಾಣವು 2019-20ರಲ್ಲಿ ಇದ್ದ 38.5%ರಿಂದ 2023-2024ರಲ್ಲಿ 57.2%ಗೆ ಏರಿಕೆ ಕಂಡಿದೆ. ಅದೇ ರೀತಿ, ಇಂಟರ್ನೆಟ್ ಸೌಲಭ್ಯ ಹೊಂದಿರುವ ಶಾಲೆಗಳ ಶೇಕಡಾವಾರು ಪ್ರಮಾಣವು 2019-20ರಲ್ಲಿ ಇದ್ದ ಶೇ.22.3ರಿಂದ 2023-2024ರಲ್ಲಿ ಶೇ.53.9ಕ್ಕೆ ಏರಿಕೆ ಕಂಡಿದೆ ಈ ಸಮೀಕ್ಷೆ ಹೇಳಿದೆ.
ಸರ್ಕಾರವು ಸಮಗ್ರ ಶಿಕ್ಷಾ ಅಭಿಯಾನ(ನಿಷ್ಟ, ವಿದ್ಯಾ ಪ್ರವೇಶ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಗಳು(ಡಯಟ್‌ಗಳು), ಕಸ್ತೂರ್ಬಾ ಗಾಂಧಿ ಬಾಲಿಕಾ ವಿದ್ಯಾಲಯ (ಕೆಜಿಬಿವಿ) ಇತ್ಯಾದಿ ಉಪಯೋಜನೆಗಳ ಜೊತೆಗೆ, ದೀಕ್ಷಾ, ಸ್ಟಾರ್ಸ್, ಪರಾಖ್, ಪಿಎಂ ಶ್ರೀ, ಉಲ್ಲಾಸ್ ಮತ್ತು ಪಿಎಂ ಪೋಷಣ್ ಸೇರಿದಂತೆ ಹಲವಾರು ಕಾರ್ಯಕ್ರಮಗಳು ಮತ್ತು ಯೋಜನೆಗಳ ಮೂಲಕ ಎನ್ಇಪಿ-2020ರ ಉದ್ದೇಶಗಳನ್ನು ಸಾಧಿಸಲು ಶ್ರಮಿಸುತ್ತಿದೆ.
ಆರಂಭಿಕ ಬಾಲ್ಯ ಆರೈಕೆ ಮತ್ತು ಶಿಕ್ಷಣ(ಇಸಿಸಿಇ) ಕ್ಷೇತ್ರವನ್ನು ಬಲಪಡಿಸಲು, ಸರ್ಕಾರವು 2024 ಏಪ್ರಿಲ್ ನಲ್ಲಿ ಇಸಿಸಿಇಗಾಗಿ ರಾಷ್ಟ್ರೀಯ ಪಠ್ಯಕ್ರಮ, ಅಡಿಪಾಯ ಮತ್ತು ಆರಂಭಿಕ ಬಾಲ್ಯ ಉತ್ತೇಜನದ ರಾಷ್ಟ್ರೀಯ ಮಾರ್ಗಸೂಚಿ – ನವಚೇತನ ಪ್ರಾರಂಭಿಸಿದೆ ಎಂದು ಸಮೀಕ್ಷೆ ಉಲ್ಲೇಖಿಸಿದೆ. ನವಚೇತನವು ಹುಟ್ಟಿನಿಂದ 3 ವರ್ಷದವರೆಗಿನ ಮಕ್ಕಳ ಸಮಗ್ರ ಅಭಿವೃದ್ಧಿಯ ಮೇಲೆ ಗಮನ ಕೇಂದ್ರೀಕರಿಸುತ್ತದೆ. 36 ತಿಂಗಳ ಉತ್ತೇಜಕ ಕ್ಯಾಲೆಂಡರ್ ಮೂಲಕ 140 ವಯಸ್ಸು-ನಿರ್ದಿಷ್ಟ ಚಟುವಟಿಕೆಗಳನ್ನು ನೀಡುತ್ತದೆ. ಆಧಾರಶಿಲೆಯು 3ರಿಂದ 6 ವರ್ಷ ವಯಸ್ಸಿನ ಮಕ್ಕಳಿಗೆ 130ಕ್ಕೂ ಹೆಚ್ಚಿನ ಚಟುವಟಿಕೆಗಳೊಂದಿಗೆ ಆಟ ಆಧಾರಿತ ಕಲಿಕೆ ಉತ್ತೇಜಿಸುತ್ತದೆ, ಇದು ಮಕ್ಕಳ ನೇತೃತ್ವದ ಮತ್ತು ಶಿಕ್ಷಕರ ನೇತೃತ್ವದ ಕಲಿಕೆಯನ್ನು ಬೆಂಬಲಿಸುತ್ತದೆ ಎಂದು ಈ ಸಮೀಕ್ಷೆ ಹೇಳಿದೆ.