ಪಂಜಾಬ್‌ನಲ್ಲಿ ಪ್ರವಾಹದಿಂದ 4,658 ಕಿ.ಮೀ ರಸ್ತೆ, 68 ಸೇತುವೆ ಹಾನಿ

ಚಂಡೀಗಢ: ಇತ್ತೀಚಿನ ಪ್ರವಾಹದಿಂದ ಪಂಜಾಬ್ ರಾಜ್ಯದ ಮೂಲಸೌಕರ್ಯಕ್ಕೆ ಭಾರೀ ಹೊಡೆತ ಬಿದ್ದಿದ್ದು, ಒಟ್ಟು 4,658 ಕಿ.ಮೀ ರಸ್ತೆ ಮತ್ತು 68 ಸೇತುವೆಗಳು ಹಾನಿಗೊಳಗಾಗಿವೆ ಎಂದು ಲೋಕೋಪಯೋಗಿ ಸಚಿವ ಹರ್ಭಜನ್ ಸಿಂಗ್ ಇಟಿಒ ಬುಧವಾರ ಮಾಹಿತಿ ನೀಡಿದರು.

ನಷ್ಟದ ಮೌಲ್ಯಮಾಪನ ಸಭೆಯ ಅಧ್ಯಕ್ಷತೆ ವಹಿಸಿದ ಅವರು, ಯೋಜನಾ ರಸ್ತೆಗಳ ಅಡಿಯಲ್ಲಿ 19 ಸೇತುವೆಗಳು ಹಾಗೂ 1,592 ಕಿ.ಮೀ ರಸ್ತೆ ಹಾನಿಯಾಗಿದ್ದು, 92 ಕಲ್ವರ್ಟ್‌ಗಳು ಮತ್ತು 4,014 ಮೀಟರ್ ಆರ್-ಗೋಡೆಗಳು ನಾಶವಾಗಿವೆ ಎಂದರು. ರಾಷ್ಟ್ರೀಯ ಹೆದ್ದಾರಿ ಅಡಿಯಲ್ಲಿ 49.69 ಕಿ.ಮೀ ರಸ್ತೆ, ನಾಲ್ಕು ಸೇತುವೆ ಹಾಗೂ 14 ಕಲ್ವರ್ಟ್‌ಗಳಿಗೆ ಹಾನಿಯಾಗಿದೆ. ಲಿಂಕ್‌ ರಸ್ತೆಗಳ ಅಡಿಯಲ್ಲಿ 45 ಸೇತುವೆ ಮತ್ತು 2,357 ಕಿ.ಮೀ ರಸ್ತೆ ಹಾನಿಗೊಳಗಾಗಿದ್ದು, ಜೊತೆಗೆ 376 ಕಲ್ವರ್ಟ್‌ಗಳು ಹಾನಿಯಾಗಿವೆ. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ನಿರ್ಮಿಸಲಾದ 657 ಕಿ.ಮೀ ರಸ್ತೆ ಸಹ ಹಾನಿಗೊಳಗಾಗಿದೆ.

ಸೇತುವೆ, ರಸ್ತೆ, ಆರ್-ವಾಲ್‌ಗಳು ಮತ್ತು ಕಲ್ವರ್ಟ್‌ಗಳ ದುರಸ್ತಿ–ಪುನರ್‌ನಿರ್ಮಾಣಕ್ಕೆ ಸುಮಾರು ರೂ.1,969 ಕೋಟಿ ವೆಚ್ಚ ಅಂದಾಜಿಸಲಾಗಿದೆ ಎಂದು ಸಚಿವರು ಹೇಳಿದರು.

ಅಮೃತಸರ–ಜಂಡಿಯಾಲ ವಿಭಾಗದ ಮಲಿಯನ್, ಟ್ಯಾಂಗ್ರಾ, ಡಾಬರ್ಜಿಯ ಫ್ಲೈಓವರ್ ಪಕ್ಕದ ಸೇವಾ ರಸ್ತೆ ಕಾಮಗಾರಿಯಲ್ಲಿ ವಿಳಂಬದಿಂದ ಆಗುತ್ತಿರುವ ಪುನರಾವರ್ತಿತ ಅಪಘಾತಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ತ್ವರಿತಗೊಳಿಸಲು NHAI ಅಧಿಕಾರಿಗಳಿಗೆ ಸೂಚನೆ ನೀಡಿದರು. ಖರಾರ್ ಮೇಲ್ಸೇತುವೆ ಕೆಳಗಿನ ವಾಹನ ದಟ್ಟಣೆ ಪರಿಹಾರಕ್ಕೂ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದರು.

ಸುಮಾರು 2,800 ಹಳ್ಳಿಗಳಲ್ಲಿ ಪ್ರವಾಹ ಹಾನಿ ಅಂದಾಜು ಮಾಡಲು ಅಪ್ಲಿಕೇಶನ್ ಆಧಾರಿತ ಸಮೀಕ್ಷೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

Related posts