ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ಬದ್ಧ: ಡಿಕೆಶಿ.

ಬೆಂಗಳೂರು: ಪಠ್ಯಪುಸ್ತಕ ಪರಿಷ್ಕರಣೆಗೆ ರಾಜ್ಯ ಸರ್ಕಾರ ಬದ್ಧವಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.

ಕೆಪಿಸಿಸಿ ಕವಚೇರಿಯಲ್ಲಿ ನೆರವೇರಿದ ನೆಹರೂ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಮಕ್ಕಳ ಶಾಲಾ ಪಠ್ಯ ಪುಸ್ತಕದಲ್ಲಿ ಇತಿಹಾಸ ತಿರುಚುವ ಸಂಚು ಮಾಡಿದ್ದು, ನಮ್ಮ ಸರ್ಕಾರ ಇದನ್ನು ಸರಿಪಡಿಸುವ ಕೆಲಸ ಮಾಡಲಿದೆ. ಇದಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅವರು ನಮ್ಮ ಕರ್ನಾಟಕದ ಇತಿಹಾಸವನ್ನು ತಿರುಚಲು ಹೇಗಿದ್ದಾರೆ. ನಾವು ಈ ವಿಚಾರದಲ್ಲಿ ಕೊಟ್ಟ ಮಾತಿನಂತೆ ನಡೆಯುತ್ತೇವೆ ಎಂದರು.

ನಾವು ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದು, ನಮ್ಮ ಕಾರ್ಯಕರ್ತರು ನಿಗದಿತ ಸಮಯದಲ್ಲಿ ಪ್ರತಿ ಮನೆಗೆ ನಮ್ಮ ಯೋಜನೆಗಳು ತಲುಪಿದೆಯಾ ಇಲ್ಲವೇ ಎಂದು ಪರಿಶೀಲನೆ ಮಾಡಿ ಅದನ್ನು ಜಿಲ್ಲಾಧಿಕಾರಿಗಳಿಗೆ ತಿಳಿಸಿ. ಶಕ್ತಿ ಯೋಜನೆಯಲ್ಲಿ 100 ಕೋಟಿ ಮಹಿಳೆಯರು ಪ್ರಯಾಣ ಮಾಡಿದ್ದಾರೆ ಎಂದು ತಿಳಿಸಿದರು.

ಕಳೆದ ವರ್ಷ ನಾವು ಭಾರತ ಜೋಡೋ ಯಾತ್ರೆ ಮಾಡಿ ತಾಯಿ ಚಾಮುಂಡೇಶ್ವರಿ ಆಶೀರ್ವಾದ ಪಡೆದೆವು. ಈ ಬಾರಿ ಆಕೆ ದಸರಾ ಹಬ್ಬದಲ್ಲಿ ಪುಷ್ಪಾರ್ಚನೆ ಮಾಡುವ ಭಾಗ್ಯವನ್ನು ನಮಗೆ ಕರುಣಿಸಿದ್ದಾಳೆ. ದಸರಾದಲ್ಲಿ ಮಹಿಳೆಯರೇ ಹೆಚ್ಚಾಗಿದ್ದರು. ಅವರ ಬಸ್ ಪ್ರಯಾಣದ ಖರ್ಚು ಉಳಿದಿರಬಹುದು. ಆದರೆ ಅಲ್ಲಿ ಅವರು ಹೊಟೇಲ್ ಗಳಲ್ಲಿ ಊಟ ಮಾಡಿದ್ದು, ಅಲ್ಲಿನ ಮಳಿಗೆಗಳಲ್ಲಿ ವಸ್ತುಗಳನ್ನು ಖರೀದಿ ಮಾಡಿದ್ದು, ವ್ಯಾಪಾರ ವಹಿವಾಟು ಹೆಚ್ಚಾಗಿ ಆರ್ಥಿಕತೆಗೆ ಉತ್ತೇಜನ ನೀಡಿದೆ. ಈ ರೀತಿ ನಮ್ಮ ಯೋಜನೆಗಳು ಆರ್ಥಿಕತೆಗೆ ಶಕ್ತಿ ತುಂಬಿವೆ. ಇದು ಕಾಂಗ್ರೆಸ್ ಪಕ್ಷದ ಚಿಂತನೆ ಎಂದವರು ಹೇಳಿದರು.

ಗೃಹಲಕ್ಷ್ಮಿ ಯೋಜನೆಗೆ 1.08 ಲಕ್ಷ ಜನ ನೋಂದಣಿ ಮಾಡಿಕೊಂಡಿದ್ದು, ಅದರಲ್ಲಿ 1.04 ಲಕ್ಷ ಜನಕ್ಕೆ ಹಣ ಸಂದಾಯವಾಗುತ್ತಿದೆ. ಉಳಿದ ನಾಲ್ಕು ಲಕ್ಷ ಜನರ ಅರ್ಜಿಯಲ್ಲಿ ತಾಂತ್ರಿಕ ದೋಷಗಳಿಂದ ಹಣ ತಲುಪಿಲ್ಲ. ಈ ದೋಷಗಳನ್ನು ಕಾರ್ಯಕರ್ತರು ಪತ್ತೆಹಚ್ಚಿ ಸರಿಪಡಿಸುವ ಕೆಲಸ ಮಾಡಬೇಕು ಎಂದ ಅವರು, ನಮ್ಮ ಗ್ಯಾರಂಟಿ ಯೋಜನೆ ಟೀಕಿಸಿದವರೆ ಉಚಿತ ಯೋಜನೆ ಘೋಷಣೆ ಮಾಡಿಕೊಂಡು ಕೂತಿದ್ದಾರೆ ಎಂದು ಟೀಕಾಕಾರರ ವಿರುದ್ದ ವಾಗ್ದಾಳಿ ನಡೆಸಿದರು.

ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ. ನಮ್ಮ ರಾಜ್ಯವನ್ನು ನೋಡಿ ತೆಲಂಗಾಣ, ಮಧ್ಯಪ್ರದೇಶದಲ್ಲೂ ಆರಂಭವಾಗಿದೆ. ನಮ್ಮ ಯೋಜನೆಗಳಿಂದ ದೇಶ ದಿವಾಳಿಯಾಗುತ್ತದೆ ಎಂದು ಹೇಳುತ್ತಿದ್ದರು. ಈಗ ಮಧ್ಯ ಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನಮಗಿಂತ ಮುಂಚೆ ಉಚಿತ ಯೋಜನೆಗಳ ಬೋರ್ಡ್ ಹಾಕಿಕೊಂಡು ಕೂತಿದ್ದಾರೆ. ಅದನ್ನು ಯಾವ ಮಾಡೆಲ್ ಎಂದು ಕರೆಯಬೇಕು? ಎಂದು‌ ಪ್ರಶ್ನಿಸಿದರು.

Related posts