ನವದೆಹಲಿ: ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಗಳು (ಪಿಎಸ್‌ಜಿಐಸಿಗಳು), ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಉದ್ಯೋಗಿಗಳು ಮತ್ತು ನಿವೃತ್ತರಿಗೆ ದೀರ್ಘಕಾಲದಿಂದ ಬಾಕಿ ಇದ್ದ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಕೇಂದ್ರ ಸರ್ಕಾರ ಶುಕ್ರವಾರ ಅನುಮೋದನೆ ನೀಡಿದೆ. ಈ ನಿರ್ಧಾರದಿಂದ ಒಟ್ಟು ಸುಮಾರು 46,322 ಉದ್ಯೋಗಿಗಳು, 23,570 ಪಿಂಚಣಿದಾರರು ಮತ್ತು 23,260 ಕುಟುಂಬ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.
ಪಿಎಸ್‌ಜಿಐಸಿಗಳ ಉದ್ಯೋಗಿಗಳಿಗೆ ವೇತನ ಪರಿಷ್ಕರಣೆ 2022ರ ಆಗಸ್ಟ್ 1ರಿಂದ ಜಾರಿಗೆ ಬರಲಿದೆ. ವೇತನ ಬಿಲ್‌ನಲ್ಲಿ ಒಟ್ಟಾರೆ ಶೇ.12.41ರಷ್ಟು ಹೆಚ್ಚಳವಾಗಿದ್ದು, ಮೂಲ ವೇತನ ಮತ್ತು ತುಟ್ಟಿ ಭತ್ಯೆಯ ಮೇಲೆ ಶೇ.14ರಷ್ಟು ಹೆಚ್ಚಳ ನೀಡಲಾಗಿದೆ. ಒಟ್ಟು 43,247 ಉದ್ಯೋಗಿಗಳು ಇದರಿಂದ ಲಾಭ ಪಡೆಯಲಿದ್ದಾರೆ. ಜೊತೆಗೆ, 2010ರ ಏಪ್ರಿಲ್ 1 ನಂತರ ನೇಮಕವಾದ ಉದ್ಯೋಗಿಗಳ ಎನ್‌ಪಿಎಸ್ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಿಸಲಾಗಿದೆ.
ಕುಟುಂಬ ಪಿಂಚಣಿಯನ್ನು ಅಧಿಕೃತ ಗೆಜೆಟ್ ಪ್ರಕಟಣೆಯ ದಿನಾಂಕದಿಂದ ಶೇ.30ರ ಏಕರೂಪ ದರದಲ್ಲಿ ಪರಿಷ್ಕರಿಸಲಾಗಿದೆ. ಈ ಕ್ರಮದಿಂದ 15,582 ಕುಟುಂಬ ಪಿಂಚಣಿದಾರರಲ್ಲಿ 14,615 ಮಂದಿ ಪ್ರಯೋಜನ ಪಡೆಯಲಿದ್ದಾರೆ. ಈ ಎಲ್ಲಾ ಪರಿಷ್ಕರಣೆಗಳಿಗೆ ಒಟ್ಟು ಆರ್ಥಿಕ ಹೊರೆ ₹8,170.30 ಕೋಟಿ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.
ನಬಾರ್ಡ್‌ನಲ್ಲಿ ಗ್ರೂಪ್ ‘ಎ’, ‘ಬಿ’ ಮತ್ತು ‘ಸಿ’ ಉದ್ಯೋಗಿಗಳಿಗೆ 2022ರ ನವೆಂಬರ್ 1ರಿಂದ ವೇತನ ಹಾಗೂ ಭತ್ಯೆಗಳಲ್ಲಿ ಸುಮಾರು ಶೇ.20ರಷ್ಟು ಹೆಚ್ಚಳ ಮಾಡಲಾಗಿದೆ. ಇದರಿಂದ ಸುಮಾರು 3,800 ಸೇವೆಯಲ್ಲಿರುವ ಮತ್ತು ನಿವೃತ್ತ ಉದ್ಯೋಗಿಗಳು ಲಾಭ ಪಡೆಯಲಿದ್ದಾರೆ. ಜೊತೆಗೆ, ನಬಾರ್ಡ್ ಹಾಗೂ ಆರ್‌ಬಿಐ ನಿವೃತ್ತರ ಪಿಂಚಣಿಯನ್ನೂ ಪರಿಷ್ಕರಿಸಲಾಗಿದ್ದು, ಆರ್‌ಬಿಐ ನಿವೃತ್ತರಿಗೆ ಶೇ.10ರಷ್ಟು ಹೆಚ್ಚಳ ಜಾರಿಗೆ ಬಂದಿದೆ. ಈ ಕ್ರಮದಿಂದ 30,769 ನಿವೃತ್ತರು ಮತ್ತು ಕುಟುಂಬ ಪಿಂಚಣಿದಾರರಿಗೆ ನೇರ ಪ್ರಯೋಜನ ದೊರೆಯಲಿದೆ.
