ಪುಣೆ: ಪುಣೆ-ಬೆಂಗಳೂರು ಹೆದ್ದಾರಿಯ ನವಲೆ ಸೇತುವೆ ಬಳಿ ಗುರುವಾರ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕನಿಷ್ಠ ಎಂಟು ಮಂದಿ ಸಾವನ್ನಪ್ಪಿ, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ಎರಡು ಕಂಟೇನರ್ ಟ್ರಕ್‌ಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡಿದ್ದು, ಬಳಿಕ ವೇಗವಾಗಿ ಬಂದ ಮತ್ತೊಂದು ಕಂಟೇನರ್ ಹಲವಾರು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಬೆಂಕಿಯಿಂದ ಎರಡು ಟ್ರಕ್‌ಗಳು ಮತ್ತು ಒಂದು ಕಾರು ಸಂಪೂರ್ಣ ಸುಟ್ಟುಹೋಗಿವೆ.
ಅಪಘಾತದ ತೀವ್ರತೆಯಿಂದ ಕೆಲವು ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಎರಡು ಕಂಟೇನರ್‌ಗಳ ನಡುವೆ ಸಿಲುಕಿಕೊಂಡಿದ್ದ ಕಾರನ್ನು ಹೊರತೆಗೆದ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.
ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ಇನ್ನೂ ಗುರುತಿಸಲಾಗಿಲ್ಲ.
ಪೊಲೀಸ್ ಮೂಲಗಳ ಪ್ರಕಾರ, ಸತಾರಾದಿಂದ ಮುಂಬೈ ಕಡೆಗೆ ಸಾಗುತ್ತಿದ್ದ ಲೋಡ್ ಕಂಟೇನರ್ ಟ್ರಕ್ ಬ್ರೇಕ್ ವೈಫಲ್ಯದಿಂದ ನಿಯಂತ್ರಣ ಕಳೆದುಕೊಂಡು ವೇಗವಾಗಿ ಬಂದ ಪರಿಣಾಮ, 7-8 ವಾಹನಗಳಿಗೆ ಡಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ. ಅದರಿಂದಾಗಿ ಎರಡು ಟ್ರಕ್‌ಗಳು ಭೀಕರವಾಗಿ ಡಿಕ್ಕಿ ಹೊಡೆದಿದ್ದು, ಅವುಗಳ ನಡುವೆ ಕಾರೊಂದು ಸಿಲುಕಿಕೊಂಡು ನಜ್ಜುಗುಜ್ಜಾಗಿದೆ. ಘರ್ಷಣೆಯಿಂದಾಗಿ ವಾಹನಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. “ಪ್ರಾಥಮಿಕ ತನಿಖೆ ಪ್ರಕಾರ, ವೇಗ ಹಾಗೂ ಯಾಂತ್ರಿಕ ವೈಫಲ್ಯವೇ ಅಪಘಾತಕ್ಕೆ ಕಾರಣವಾಗಿರಬಹುದು,” ಎಂದು ಅವರು ಹೇಳಿದರು.
ಎನ್‌ಸಿಪಿ-ಎಸ್‌ಪಿ ಸಂಸದೆ ಸುಪ್ರಿಯಾ ಸುಳೆ ಅವರು ಸಾಮಾಜಿಕ ಮಾಧ್ಯಮ ಎಕ್ಸ್ ಮೂಲಕ ತಮ್ಮ ಸಂತಾಪವನ್ನು ವ್ಯಕ್ತಪಡಿಸಿ, “ಈ ದುರಂತ ಅತ್ಯಂತ ದುಃಖಕರ. ಮೃತಪಟ್ಟವರಿಗೆ ಗೌರವ ಸಲ್ಲಿಸುತ್ತೇನೆ, ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ” ಎಂದು ತಿಳಿಸಿದ್ದಾರೆ.
