ದೆಹಲಿ: ಪೆಟ್ರೋಲ್ ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ಪ್ರತೀ ಲೀಟರ್ ಪೆಟ್ರೋಲ್ ದರ 34 ಪೈಸೆ ಏರಿಕೆಯಾಗಿದ್ದು, ಡೀಸೆಲ್ ದರದಲ್ಲಿ 58 ಪೈಸೆ ಹೆಚ್ಚಳವಾಗಿದೆ.
ಲಾಕ್ ಡೌನ್ ಸಂದರ್ಭದಲ್ಲಿ ತೈಲ ದರವನ್ನು ತೈಲ ಕಂಪೆನಿಗಳು ಪರಿಷ್ಕರಣೆ ಮಾಡಿರಲಿಲ್ಲ. ಕಳೆದೆರಡು ವಾರಗಳಿಂದ ಪರಿಷ್ಕರಿಸಲು ಆರಂಭಿಸಿರುವ ತೈಲ ಕಂಪೆನಿಗಳು ನಿತ್ಯವೂ ಪೆಟ್ರೋಲ್ ಡೀಸೆಲ್ ದರವನ್ನು ಹೆಚ್ಚಿಸುತ್ತಲಿವೆ. 16 ದಿನಗಳಿಂದ ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 82.15 ರೂಪಾಯಿಗೆ ಏರಿಕೆಯಾಗಿದ್ದು, ಡೀಸೆಲ್ ದರ 74.98 ರೂಪಾಯಿಗೆ ಏರಿಕೆಯಾಗಿದೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿನ ಕಚ್ಚಾ ತೈಲ ದರವನ್ನಾಧರಿಸಿ, ಹಾಗೂ ಮಾರುಕಟ್ಟೆ ವಿದ್ಯಮಾನಗಳನ್ನಾಧರಿಸಿ ತೈಲ ದರ ಪರಿಷ್ಕರಿಸಲು ತೈಲ ಕಂಪೆನಿಗಳಿಗೆ ಸರ್ಕಾರ ಅವಕಾಶ ಕಲ್ಪಿಸಿದೆ. ಆದರೆ ಜಾಗತಿಕವಾಗಿ ತೈಲ ಬೇಡಿಕೆ ಕುಸಿದು, ಕಚ್ಚಾ ತೈಲ ದರ ದಾಖಲೆ ಪ್ರಮಾಣದಲ್ಲಿ ಇಳಿಕೆಯಾದರೂ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಕೆಯಾಗಲಿಲ್ಲ.