ಬೆಂಗಳೂರು: “ಮತಗಳ್ಳತನ ತಡೆಯುವುದು ಕೇವಲ ಚುನಾವಣೆ ಸ್ವಚ್ಛತೆಗೆ ಸಂಬಂಧಿಸಿದ ವಿಷಯವಲ್ಲ, ಪ್ರಜಾಪ್ರಭುತ್ವದ ಅಸ್ತಿತ್ವಕ್ಕೂ ಸಂಬಂಧಿಸಿದೆ. ಬಿಜೆಪಿ ಚುನಾವಣಾ ಆಯೋಗ, ಇಡಿ, ಸಿಬಿಐ, ಐಟಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸುತ್ತಿದೆ,” ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್ ಟೀಕಿಸಿದರು.
ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ‘ಕ್ವಿಟ್ ಇಂಡಿಯಾ’ ದಿನಾಚರಣೆಯಲ್ಲಿ ಮಾತನಾಡಿದ ಅವರು, “1942ರ ಚಳುವಳಿಯಂತೆ, ಇಂದಿನ ದಿನಗಳಲ್ಲಿ ಕೇಂದ್ರದ ಜನವಿರೋಧಿ ನೀತಿಯ ವಿರುದ್ಧ ತಾರ್ಕಿಕ ಅಂತ್ಯ ಕಾಣುವ ಹೋರಾಟ ಅಗತ್ಯ. ರಾಹುಲ್ ಗಾಂಧಿ ಅವರ ಮೇಲೆ 51 ಪ್ರಕರಣ ದಾಖಲಿಸಿ, ಮಾತನಾಡುವ ಹಕ್ಕೇ ಕಸಿದುಕೊಳ್ಳುತ್ತಿರುವುದು ಪ್ರಜಾಪ್ರಭುತ್ವಕ್ಕೆ ಧಕ್ಕೆಯಾಗಿದೆ,” ಎಂದರು.
ಮತದಾನದಲ್ಲಿ ಅಕ್ರಮಗಳ ಬಗ್ಗೆ ಅವರು ಗಂಭೀರ ಆಕ್ಷೇಪ ವ್ಯಕ್ತಪಡಿಸಿದರು. “25 ಕ್ಷೇತ್ರಗಳಲ್ಲಿ ಚುನಾವಣೆ ಪಾರದರ್ಶಕವಾಗಿದ್ದರೆ ನರೇಂದ್ರ ಮೋದಿ ಪ್ರಧಾನಿಯಾಗಿರುತ್ತಿರಲಿಲ್ಲ. ಅಕ್ರಮ ತಡೆಯಲು 5 ಸಮಿತಿಗಳನ್ನು ರಚಿಸಿದ್ದೇವೆ. ಯಾರೇ ‘ಮತಗಳ್ಳತನ ದೊಡ್ಡ ಸಮಸ್ಯೆಯಲ್ಲ’ ಎಂದು ಭಾವಿಸಿದರೆ, ಅದು ಅವರ ದಡ್ಡತನ,” ಎಂದು ಚಂದ್ರಶೇಖರ್ ವ್ಯಂಗ್ಯವಾಡಿದರು.
“ಬಿಜೆಪಿಗೆ ಗೆಲುವಿನ ಅಂಕಿಗಳ ಲೆಕ್ಕ ಗೊತ್ತಿದೆ, ಆದರೆ ಆಡಳಿತ ಹೇಗೆ ಮಾಡಬೇಕು ಎಂಬುದು ಗೊತ್ತಿಲ್ಲ. ಅಮೆರಿಕ ಅಧ್ಯಕ್ಷರನ್ನು ಹೊಗಳಿದವರು, ಇಂದು ಚೀನಾದ ಮುಂದೆ ತಲೆ ಬಾಗುವ ಪರಿಸ್ಥಿತಿಗೆ ಬಂದಿದ್ದಾರೆ,” ಎಂದೂ ಅವರು ಟೀಕಿಸಿದರು.
ಕಾರ್ಯಕ್ರಮದಲ್ಲಿ ಸಚಿವ ಕೆ.ಎಚ್. ಮುನಿಯಪ್ಪ, ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಸಚಿವೆ ರಾಣಿ ಸತೀಶ್, ಬಿ.ಟಿ. ಲಲಿತಾ ನಾಯಕ್, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಾಗೂ ಇತರ ನಾಯಕರು ಭಾಗವಹಿಸಿದ್ದರು.