ಪ್ರಧಾನ ಮಂತ್ರಿ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನಾ ಪೋರ್ಟಲ್ ಕಾರ್ಯಾರಂಭ

ನವದೆಹಲಿ: ಭಾರತದ 79ನೇ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದ ವಿಕ್ಷಿತ್ ಭಾರತ್ ರೋಜ್‌ಗಾರ್ ಯೋಜನೆಗಾಗಿ ಮೀಸಲಾದ ಪೋರ್ಟಲ್ ಸೋಮವಾರದಿಂದ ಕಾರ್ಯಾರಂಭ ಮಾಡಿದೆ.

ಸುಮಾರು 1 ಲಕ್ಷ ಕೋಟಿ ರೂ.ಗಳ ವೆಚ್ಚದ ಈ ಯೋಜನೆ, ಆಗಸ್ಟ್‌ 1, 2025 ರಿಂದ ಜುಲೈ 31, 2027ರ ವರೆಗೆ ಎರಡು ವರ್ಷಗಳ ಅವಧಿಯಲ್ಲಿ 3.5 ಕೋಟಿಗೂ ಹೆಚ್ಚು ಉದ್ಯೋಗಗಳ ಸೃಷ್ಟಿಗೆ ಪ್ರೋತ್ಸಾಹ ನೀಡುವ ಗುರಿ ಹೊಂದಿದೆ. ಉದ್ಯೋಗ ಸೃಷ್ಟಿ, ಉದ್ಯೋಗಾವಕಾಶ ವಿಸ್ತರಣೆ ಹಾಗೂ ಸಾಮಾಜಿಕ ಭದ್ರತೆಯನ್ನು ಒದಗಿಸುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ.

ಉದ್ಯೋಗದಾತರು ಇದೀಗ ಪೋರ್ಟಲ್‌ನಲ್ಲಿ ಒಂದು ಬಾರಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಎಲ್ಲಾ ಮೊದಲ ಬಾರಿಗೆ ಉದ್ಯೋಗ ಪಡೆಯುವವರು UMANG ಆಪ್‌ನಲ್ಲಿ ಲಭ್ಯವಿರುವ ಫೇಸ್ ಅಥೆಂಟಿಕೇಶನ್ ಟೆಕ್ನಾಲಜಿ (FAT) ಮೂಲಕ ಸಾರ್ವತ್ರಿಕ ಖಾತೆ ಸಂಖ್ಯೆ (UAN) ಪಡೆಯಬೇಕು.

ಯೋಜನೆಯಡಿಯಲ್ಲಿ.. 
ಹೊಸ ಉದ್ಯೋಗಿಗಳಿಗೆ ಎರಡು ಕಂತುಗಳಲ್ಲಿ ₹15,000 ವರೆಗೆ ಪ್ರೋತ್ಸಾಹ ಧನ DBT ಮೂಲಕ ನೀಡಲಾಗುತ್ತದೆ.
ಉದ್ಯೋಗದಾತರಿಗೆ ಪ್ರತಿಯೊಂದು ಹೊಸ ನೇಮಕಾತಿ ಮಾಡಿದ ಉದ್ಯೋಗಿಗೆ ತಿಂಗಳಿಗೆ ₹3,000 ವರೆಗೆ ಪ್ರೋತ್ಸಾಹ ನೀಡಲಾಗುತ್ತದೆ.
ಸರ್ಕಾರದ ಪ್ರಕಾರ, ಭಾಗ A ಅಡಿಯಲ್ಲಿ ಉದ್ಯೋಗಿಗಳಿಗೆ ಪಾವತಿಗಳು ಆಧಾರ್ ಬ್ರಿಡ್ಜ್ ಪಾವತಿ ವ್ಯವಸ್ಥೆ (ABPS) ಮೂಲಕ ನೇರವಾಗಿ ತಲುಪಲಿದ್ದು, ಭಾಗ B ಅಡಿಯಲ್ಲಿ ಉದ್ಯೋಗದಾತರಿಗೆ ಪಾವತಿಗಳು ಅವರ ಪ್ಯಾನ್ ಲಿಂಕ್ಡ್ ಖಾತೆಗಳಿಗೆ ಜಮೆಯಾಗಲಿದೆ.

ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಮೂಲಕ ಜಾರಿಗೆ ತರುತ್ತಿರುವ ಈ ಯೋಜನೆಯಿಂದ ಉದ್ಯೋಗಿಗಳಿಗೆ ಸಾಮಾಜಿಕ ಭದ್ರತಾ ವ್ಯಾಪ್ತಿಯ ವಿಸ್ತರಣೆ, ಉದ್ಯೋಗದ ಔಪಚಾರಿಕೀಕರಣ, ಕಾರ್ಯಸ್ಥಳದಲ್ಲಿ ತರಬೇತಿ ಮತ್ತು ಆರ್ಥಿಕ ಸಾಕ್ಷರತೆಯ ಸುಧಾರಣೆ ಸಾಧ್ಯವಾಗಲಿದೆ. ಉದ್ಯೋಗದಾತರಿಗೆ ಉತ್ಪಾದಕತೆ ಹಾಗೂ ಕಾರ್ಯಪಡೆಯ ಸ್ಥಿರತೆಯ ಲಾಭ ದೊರೆಯಲಿದೆ.

Related posts