‘ಫೇಸ್‌ಬುಕ್’ ಬುಡಕ್ಕೆ ಬೆಂಕಿ ಇಟ್ಟ ಕನ್ನಡಿಗ; ದೈತ್ಯನನ್ನು ಬ್ಯಾನ್ ಮಾಡಲು ಸಾಧ್ಯವೇ?

ಬೆಂಗಳೂರು: ಜಗ್ಗತ್ತಿನ ದೈತ್ಯ ಸೋಷಿಯಲ್ ಮೀಡಿಯಾ ‘ಫೇಸ್ ಬುಕ್’ ಇದೀಗ ಸಂಕಷ್ಟದ ಸುಳಿಯಲ್ಲಿದೆ. ಅಸಹಾಯಕ ಕುಟುಂಬಕ್ಕೆ ನೆರವಾಗುವ ಸಂಬಂಧ ಕನ್ನಡಿಗ ಚಾಣಾಕ್ಯ ವಕೀಲ ಪಿಪಿ ಹೆಗ್ಡೆ ಅವರು ಫೇಸ್ ಬುಕ್ ವಿರುದ್ಧ ಸಾರಿರುವ ಸಮರ ಇದೀಗ ಇಡೀ ಜಗತ್ತಿನಲ್ಲೇ ಭಾರೀ ಚರ್ಚೆಗೆ ಕಾರಣವಾಗಿದೆ. ನಕಲಿ ಖಾತೆ ಅವಾಂತರ ಕುರಿತ ಪ್ರಕರಣವೊಂದರಲ್ಲಿ ಕರ್ನಾಟಕ ಹೈಕೋರ್ಟ್ ‘ಫೇಸ್‌ಬುಕ್’ ಸಂಸ್ಥೆಯನ್ನು ತರಾಟೆಗೆ ತೆಗೆದುಕೊಂಡಿದ್ದು ಭಾರತದಲ್ಲಿ ಬ್ಯಾನ್ ಮಾಡುವ ಬಗ್ಗೆ ಎಚ್ಚರಿಕೆ ನೀಡಿದೆ.

ನಿಷೇಧ ಸಾಧ್ಯವೇ..?

ಪ್ರಕರಣಗಳಲ್ಲಿ ಬ್ಯಾನ್ ಬಗ್ಗೆ ಚರ್ಚೆಗಳು ಬರುವುದು ಸಹಜ. ಆದರೆ ನಕಲಿ ಖಾತೆ ಅಥವಾ ಮಾನಹಾನಿ ಪೋಸ್ಟ್’ಗಳ ವಿಚಾರದಲ್ಲಿ ಸೋಷಿಯಲ್ ಮೀಡಿಯಾ ಕಂಪನಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ಇದೆಯೇ ಎಂಬ ಜಿಜ್ಞಾಸೆ ಕಾಡುದೆ. ಈ ಕುರಿತಂತೆ ಸಾಮಾಜಿಕ ವಲಯದಲ್ಲಿ ಭಾರೀ ಚರ್ಚೆಗಳೂ ಸಾಗಿವೆ.

ಯಾವುದೇ ಪ್ರಕರಣಗಳಿರಲಿ ನೇರವಾಗಿ ಭಾಗಿಯಾದರೇ ಮಾತ್ರಕ್ಕೆ ಆರೋಪಿ ಎಂದು ಪರಿಗಣಿಸಬೇಕೆಂದಿಲ್ಲ. ಪಿತೂರಿ ನಡೆಸಿದರೂ, ಕೃತ್ಯಕ್ಕೆ ಅವಕಾಶ ಮಾಡಿಕೊಟ್ಟರೂ, ಪರೋಕ್ಷವಾಗಿ ಸಹಕಾರ ನೀಡಿದರೂ ಆರೋಪಿ ಸ್ಥಾನದಲ್ಲಿ ನಿಲ್ಲಬೇಕಾಗುತ್ತದೆ. ಅಂತಹಾ ಸ್ಥಾನದಲ್ಲೀಗ ‘ಫೇಸ್‌ಬುಕ್’ ನಿಂತಿದೆ ಎಂಬುದು ಕಾನೂನು ತಜ್ಞರ ಅಭಿಮತ. ಇದೇ ಅಭಿಪ್ರಾಯವನ್ನು ಮುಂದಿಟ್ಟು ಕರ್ನಾಟಕ ಹೈಕೋರ್ಟ್’ನ ಹಿರಿಯ ವಕೀಲ ಪಿ.ಪಿ.ಹೆಗ್ಡೆ ಅವರು ‘ಫೇಸ್‌ಬುಕ್’ ವಿರುದ್ದ ಸಮರದ ಅಖಾಡಕ್ಕೆ ಧುಮುಕಿದ್ದಾರೆ.

ಅನೈತಿಕ ಪ್ರಕರಣಗಳಲ್ಲಿ, ಅಪರಾಧ ಪ್ರಕರಣಗಳಲ್ಲಿ, ವಂಚನೆಯ ಕೇಸ್’ಗಳಲ್ಲೂ ಕೃತ್ಯಕ್ಕೆ ನೇರವಾಗಿ ಕಾರಣಕರ್ತರಾದವರಷ್ಟೇ ಅಲ್ಲ, ಅವಕಾಶ ಮಾಡಿಕೊಟ್ಟರವರನ್ನೂ ಆರೋಪಿಗಳನ್ನಾಗಿಸಿರುವ ಪ್ರಕರಣಗಳು ಹಲವಾರು ಇವೆ. ರೇವ್ ಪಾರ್ಟಿ ನಡೆದಲ್ಲಿ ಸ್ಥಳಾವಕಾಶ ನೀಡಿದವರೂ ಆರೋಪಿಗಳೇ ಎಂಬುದು ಪೊಲೀಸರ ಅಭಿಪ್ರಾಯ, ವೇಶ್ಯಾವಾಟಿಕೆ ಪ್ರಕರಣಗಳಲ್ಲಿ ಹೋಟೆಲ್ ಮಾಲೀಕರನ್ನೂ ಆರೋಪಿಗಳನ್ನಾಗಿಸಿದ್ದೂ ಇದೆ. ವಾಹನ ಅಪಘಾತವಾಗಿ ಮಾರಣಹೋಮ ನಡೆದಲ್ಲಿ ವಾಹನ ಮಾಲೀಕರ ವಿರುದ್ಧ ಕೇಸ್ ದಾಖಲಿಸಿದ ಪ್ರಸಂಗಗಳೂ ಇವೆ. ಅಪಹರಣ, ಕೊಲೆ ಇತ್ಯಾದಿ ಕೇಸ್’ಗಳಲ್ಲಿ ಕೃತ್ಯಕ್ಕೆ ಬಳಕೆಯಾದ ವಾಹನಗಳ ಮಾಲೀಕರನ್ನೂ ಅಪರಾಧಿಗಳೆಂದು ಪರಿಗಣಿಸಿರುವ ಸನ್ನಿವೇಶಗಳೂ ಇವೆ ಎಂದಿರುವಾಗ, ನಕಲಿ ಖಾತೆಗಳಿಗೆ ಅವಕಾಶ ಕಲ್ಪಿಸಿ ಅಮಾಯಕರ ಬದುಕಿಗೆ ಸಂಚಕಾರ ತಂದಿರುವ ‘ಫೇಸ್‌ಬುಕ್’ ಸಂಸ್ಥೆಯನ್ನು ಆರೋಪಿ ಎಂದು ಪರಿಗಣಿಸಬಾರದೇಕೆ? ಎಂಬುದು ಹಲವರ ಪ್ರಶ್ನೆ.

ಸಾಮಾಜಿಕ ಜಾಲತಾಣಗಳ ಮೂಲಕ ಅವೆಷ್ಟೋ ಮಂದಿ ಮಾನಹಾನಿಯಿಂದ ನೊಂದು ಸಾವಿಗೆ‌ ಶರಣಾಗಿದ್ದಾರೆ. ಈ ರೀತಿಯ ಪ್ರಕರಣಗಳಿಗೂ ಮಾಧ್ಯಮಗಳಲ್ಲಿನ ಮಾನಹಾನಿ ಪ್ರಕರಣಗಳಿಗೂ ವ್ಯತ್ಯಾಸ ಇಲ್ಲ. ಆದರೆ ಮಾಧ್ಯಮಗಳಲ್ಲಿನ ಮಾನಹಾನಿ ಪ್ರಕರಣಗಳಲ್ಲಿ ವರದಿಗಾರ, ಸಂಪಾದಕ, ಪ್ರಕಾಶಕ, ಮುದ್ರಕರೆಲ್ಲರನ್ನೂ ಪ್ರತಿವಾದಿಗಳನ್ನಾಗಿಸಲಾಗುತ್ತದೆ. ಅದೇ ರೀತಿ ಫೇಸ್‌ಬುಕ್, ಮತ್ತಿತರ ಸಾಮಾಜಿಕ ಜಾಲತಾಣಗಲ್ಲಿ ಯಾವುದೇ ವ್ಯಕ್ತಿಯ ಬಗ್ಗೆ ಮಾನಹಾನಿ ಪೋಸ್ಟ್’ಗಳು ಹಾಕಲ್ಪಟ್ಟರೆ ಹಾಕಿದವರಷ್ಟೇ ಅಲ್ಲ, ಕೃತ್ಯಕ್ಕೆ ಫ್ಲಾಟ್ ಪಾರಂ ಆಗಿರುವ ಸೋಷಿಯಲ್ ಮೀಡಿಯಾ ಸಂಸ್ಥೆಗಳೂ ಹೊಣೆಯಾಗುತ್ತವೆ. ಈ ಸಂಗತಿಗಳನ್ನೇ ಆಧಾರವಾಗಿಟ್ಟುಕೊಂಡು ಕರ್ನಾಟಕ ಬಾರ್ ಕೌನ್ಸಿಲ್ ಮಾಜಿ ಅಧ್ಯಕ್ಷರೂ ಆಗಿರುವ ಸೀನಿಯರ್ ಕೌನ್ಸೆಲ್ ಪಿ.ಪಿ.ಹೆಗ್ಡೆ ಅವರು ಇದೀಗ ‘ಫೇಸ್‌ಬುಕ್’ನ ಅವಾಂತರಗಳನ್ನು ಕಾನೂನು ಕಟಕಟೆಯತ್ತ ತಂದು ಇಟ್ಟಿದ್ದಾರೆ.

ಮುಂದೇನಾಗಬಹುದು?

ಮಂಗಳೂರು ಮೂಲದ ಶೈಲೇಶ್ ಕುಮಾರ್ ಎಂಬವರು ಸೌದಿ ಅರಬೀಯಾದಲ್ಲಿ ನೌಕರಿ ಮಾಡಿಕೊಂಡಿದ್ದು, 2019 ರಲ್ಲಿ ಭಾರತದಲ್ಲಿನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಸಂದೇಶ ಹಾಕಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಖಾತೆಯನ್ನೇ ಡಿಲೀಟ್ ಮಾಡಿದ್ದರೆನ್ನಲಾಗಿದೆ. ಆದರೆ, ಅವರ ಹೆಸರಿನಲ್ಲಿ ಇನ್ಯಾರೋ ನಕಲಿ ಫೇಸ್‌ಬುಕ್ ಖಾತೆ ತೆರೆದು ಸೌದಿ ಅರಬೀಯಾದ ರಾಜ ಮತ್ತು ಇಸ್ಲಾಂ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಬೆಳವಣಿಗೆ ಬಗ್ಗೆ ಕುಮಾರ್ ಅವರು ಟ್ರಮ್ಮ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಆದರೆ ಅಷ್ಟರಲ್ಲೇ ಸೌದಿ ಪೊಲೀಸರು ಶೈಲೇಶ್ ಕುಮಾರ್ ಅವರನ್ನು ಬಂಧಿಸಿ ಜೈಲಿಗೆ ಹಾಕಿದ್ದರು. ಇದರಿಂದ ನೊಂದ ಶೈಲೇಶ್ ಪತ್ನಿ ಕವಿತಾ ಅವರು ಮಂಗಳೂರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರು ಫೇಸ್‌ಬುಕ್ ಬಗ್ಗೆ ಆಳವಾದ ತನಿಖೆ ನಡೆಸುವ ಬಗ್ಗೆ ಆಸಕ್ತಿ ವಹಿಸಲಿಲ್ಲ. ಹಾಗಾಗಿ ಸೇನಿಯರ್ ಕೌನ್ಸಿಲ್ ಪಿ.ಪಿ.ಹೆಗ್ಡೆ ಮೂಲಕ ಹೈಕೋರ್ಟ್’ನಲ್ಲಿ ಧಾವೆ ಹೂಡಿದ್ದಾರೆ.

ಈ ಕುರಿತಂತೆ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಪೀಠವು ಫೇಸ್‌ಬುಕ್ ಕಾರ್ಯವೈಖರಿ ಬಗ್ಗೆ ಸಿಡಿಮಿಡಿಗೊಂಡಿದೆ. ನಕಲಿ ಖಾತೆ ಬಗ್ಗೆ ಮಾಹಿತಿ ನೀಡಬೇಕು ಇಲ್ಲವಾದರೆ ಫೇಸ್ ಬುಕ್ಕನ್ನು ಬ್ಯಾನ್ ಮಾಡಬೇಕಾಗುತ್ತೆ ಎಂದು ನ್ಯಾಯಪೀಠ ಎಚ್ಚರಿಕೆ ನೀಡಿದೆ. ಸುಳ್ಳು ಪ್ರಕರಣದಲ್ಲಿ ಭಾರತೀಯ ಪ್ರಜೆಯನ್ನು ಬಂಧಿಸಿರುವ ಪ್ರಕರಣದಲ್ಲಿ ಯಾವ ಕ್ರಮ ಪ್ರಾರಂಭಿಸಿದೆ ಎಂಬ ಬಗ್ಗೆ ಕೇಂದ್ರ ಸರ್ಕಾರ ಮಾಹಿತಿ ನೀಡಬೇಕು, ಮಂಗಳೂರು ಪೊಲೀಸರು ಕೂಡ ಸೂಕ್ತ ತನಿಖೆ ನಡೆಸಿ ವರದಿ ಸಲ್ಲಿಸಬೇಕು ಎಂದು ಸೂಚಿಸಿರುವ ಹೈಕೋರ್ಟ್ ಪೀಠ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿದೆ.

ಈ ಪ್ರಕರಣವು ಕೇಂದ್ರ ಸರ್ಕಾರಕ್ಕೂ ಸವಾಲಾಗಿದೆ. ನಕಲಿಗಳ ಹಾವಳಿಗಳಿಗೆ, ಮಾನಹಾನಿ ಪೋಸ್ಟ್’ಗಳಿಗೆ ಅವಾಕಾಶ ನೀಡುವ ಸೋಷಿಯಲ್ ಮೀಡಿಯಾಗಳಿಗೆ ಅಂಕುಶ ಹಾಕಬೇಕೆಂಬ ಒತ್ತಡವೂ ಹೆಚ್ಚಾಗಿದೆ. ಮಾಧ್ಯಮಗಳಿಗೆ ಸಂಪಾದಕರೇ ಹೊಣೆಯಾಗಿರುತ್ತಾರೆ, ಆದರೆ ಸೋಷಿಯಲ್ ಮೀಡಿಯಾಗಳಿಗೆ ಹೊಣೆಯಾಗುವವರು ಯಾರು? ಎಂಬ ಜಿಜ್ಞಾಸೆ ಇದೆ. ಹಾಗಾಗಿ ದೇಶದ ಭದ್ರತೆಗೆ ಸವಾಲಾಗಿರುವ ಸೋಷಿಯಲ್ ಮೀಡಿಯಾಗಳಿಗೆ ನಿಷೇಧ ಹೇರಬೇಕೆಂಬ ಅಭಿಪ್ರಾಯವೂ ಕೇಳಿಬಂದಿವೆ.

ಪ್ರಸ್ತುತ ಸ್ಥಿತಿಯಲ್ಲಿ ನಕಲಿ ಹಾವಳಿ ನಿಯಂತ್ರಣವು ಸಾಮಾಜಿಕ ಜಾಲತಾಣಗಳದ್ದೇ ಜವಾಬ್ಧಾರಿಯಾಗಿದ್ದು, ಒಂದು ವೇಳೆ ನಿರ್ಲಕ್ಷ್ಯ ತೋರಿದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ಈಗಿರುವ ಕಾನೂನಿನಲ್ಲೇ ಅವಕಾಶ ಇದೆ. ಪ್ರತ್ಯೇಕ ಕಾನೂನು ರೂಪಿಸುವ ಅಗತ್ಯ ಇಲ್ಲ. ಹಾಗಾಗಿ ನಿಷ್ಟೂರ ಕ್ರಮ ಕೈಗೊಳ್ಳಲು ಮೋದಿ ಸರ್ಕಾರ ಸ್ವತಂತ್ರವಾಗಿದೆ ಎನ್ನುತ್ತಾರೆ ಸಂವಿಧಾನ ತಜ್ಞರು.

Related posts