ಬಿಜೆಪಿ ನನಗೆ ಎಲ್ಲವನ್ನೂ ಕೊಟ್ಟಿದೆ: ಸಚಿವ ಎಸ್.ಟಿ.ಸೋಮಶೇಖರ್

ಬೆಂಗಳೂರು: ‘ಬಿಜೆಪಿ ನನಗೆ ಎಲ್ಲವನ್ನೂ ನೀಡಿದೆ. ಸಚಿವ ಸ್ಥಾನ ನೀಡುವುದರ ಜೊತೆಗೆ ಹಲವು ಜವಾಬ್ದಾರಿಗಳನ್ನು ನೀಡಿರುವ ಬಿಜೆಪಿಯನ್ನು ಯೊರೆಯುವ ಪ್ರಮೇಯವೇ ಇಲ್ಲ’ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಸ್ಪಷ್ಟಪಡಿಸಿದ್ದಾರೆ.

ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಸ್.ಟಿ.ಸೋಮಶೇಖರ್ ಅವರು ರಾಮೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬೂತ್ ಮಟ್ಟದ ಸಭೆ ನಡೆಸಿದರು. ಚಳ್ಳಘಟ್ಟ, ಬೆಟ್ಟನಪಾಳ್ಯ, ಭೀಮನಕುಪ್ಪೆ, ರಾಮೋಹಳ್ಳಿ ಸೇರಿದಂತೆ ನಾನಾ ಗ್ರಾಮಗಳಲ್ಲಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿದರು.

ಜನರ ಕುಂದುಕೊರತೆಗಳನ್ನು ಆಲಿಸಿದ ನಂತರ ಮಾತನಾಡಿದ ಸಚಿವರು, ತಮ್ಮ ಅಧಿಕಾರಾವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದೇನೆ. ಕುಡಿಯುವ ನೀರು, ರಸ್ತೆ, ಚರಂಡಿ ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಯಾವುದೇ ಸಮಸ್ಯೆಗಳಿದ್ದರು ಗಮನಕ್ಕೆ ತಂದರೆ ಪರಿಹರಿಸಲಾಗುವುದು ಎಂದರು.

ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಸಚಿವ ಸ್ಥಾನ ನೀಡುವುದರ ಜೊತೆಗೆ ಹಲವು ಜವಾಬ್ದಾರಿಗಳನ್ನು ನೀಡಿರುವ ಬಿಜೆಪಿಯನ್ನು ಯೊರೆಯುವ ಪ್ರಮೇಯವೇ ಇಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಿಂದ ಸಹಕಾರ ಸಚಿವರಾಗಿ, ಮೈಸೂರು ಜಿಲ್ಲಾ ಉಸ್ತುವಾರಿ ಹೊಣೆ ಜೊತೆಗೆ ಕ್ಷೇತ್ರದ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಲಾಗಿದೆ. ಕ್ಷೇತ್ರದ ಜನತೆಯ ಆಶೀರ್ವಾದದಿಂದ ರಾಷ್ಟ್ರಪತಿಗಳು, ಪ್ರಧಾನಿ ನರೇಂದ್ರ ಮೋದಿ ಅವರು, ಅಮಿತ್ ಶಾ ಅವರ ಪಕ್ಕದಲ್ಲಿ ಕೂರುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಜೆಡಿಎಸ್ ಕಾರ್ಯಕರ್ತರು ಬಿಜೆಪಿಗೆ

ರಾಮೋಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನಾನಾ ಗ್ರಾಮಗಳಲ್ಲಿನ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆಯಾದರು. ಯುವ ನಾಯಕರಾದ ನಿಶಾಂತ್ ಸೋಮಶೇಖರ್, ಕುಂಬಳಗೋಡು ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಗ್ರಾಮ ಪಂಚಾಯತಿ ಸದಸ್ಯರು ಸೇರಿದಂತೆ ನಾನಾ ಮುಖಂಡರು ಜೊತೆಯಲ್ಲಿದ್ದರು.

Related posts