ಬೆಂಗಳೂರು: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಬೆಂಗಳೂರಿನ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿನ ಪ್ರಕರಣವೊಂದರಲ್ಲಿ ಸ್ಥಳೀಯ ಪೊಲೀಸರ ಕರ್ತವ್ಯಲೋಪ ಪ್ರಕರಣದಲ್ಲಿ ಖುದ್ದು ಹಾಜರಾಗುವಂತೆ ನಗರ ಪೊಲೀಸ್ ಆಯುಕ್ತರಿಗೆ ಬೆಂಗಳೂರಿನ ನ್ಯಾಯಾಲಯವು ಸಮನ್ಸ್ ಹೊರಡಿಸಿದೆ.
ಬೆಂಗಳೂರಿನ ಹೆಣ್ಣೂರು ಠಾಣಾವ್ಯಾಪ್ತಿಯಲ್ಲಿ ಕೆಲವು ದಿನಗಳ ಹಿಂದೆ ಕೇರಳ ಮೂಲದ ವ್ಯಕ್ತಿಯ ಕೌಟುಂಬಿಕ ವ್ಯಾಜ್ಯದ ನಡುವೆ ಕೆಲವು ರೌಡಿಗಳು ಸಜಿ ಜೋಸೆಫ್ ಎಂಬವರ ಜಮೀನಿಗೆ ನುಗ್ಗಿ ದಾಂದಲೆ ನಡೆಸಿದ್ದ ಘಟನೆ ಭಾರೀ ಸುದ್ದಿಯಾಗಿತ್ತು. ತಾವು ಸಚಿವ ಭೈರತಿ ಸುರೇಶ್ ಸಹಚರರೆಂದು ಹೇಳಿ ಸ್ಥಳೀಯ ರೌಡಿಗಳು ಜಮೀನು ಬಿಟ್ಟುಕೊಡುವಂತೆ ಜೀವಬೆದರಿಕೆಯೊಡ್ಡಿದ್ದರು. ಅಷ್ಟೇ ಅಲ್ಲ, ಕೆಲವು ವ್ಯಕ್ತಿಗಳನ್ನು ಹಾಗೂ ನಿಷೇಧಿತ ನಾಯಿಯನ್ನೂ ಸ್ಥಳದಲ್ಲಿ ನಿಯೋಜಿಸಿದ್ದಾರೆ ಎಂದು ಕಿರುಕುಳಕ್ಕೆ ಒಳಗಾದ ಸಜಿ ಜೋಸೆಫ್ ಆರೋಪಿಸಿದ್ದರು. ರೌಡಿಗಳ ಜೊತೆ ಸ್ಥಳೀಯ ಪೊಲೀಸರೂ ಸ್ಥಳಕ್ಕೆ ಭೇಟಿ ನೀಡಿ ತಮಗೆ ಬೆದರಿಸಿದ್ದರು ಎಂದು ಜೋಸೆಫ್ ಆರೋಪಿಸಿದ್ದರು. ಈ ಸಂಬಂಧ ಗೃಹ ಸಚಿವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಹಾಗೂ ಪೊಲೀಸ್ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಆದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಸಜಿ ಜೋಸೆಫ್ ಸ್ಥಳೀಯ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.
ಬೆಂಗಳೂರಿನ ಮೇಯೋಹಾಲ್’ನಲ್ಲಿರುವ ‘ನಗರ ಸಿಟಿ ಸಿವಿಲ್ ನ್ಯಾಯಾಲಯ’ದಲ್ಲಿ ಸಜಿ ಜೋಸೆಫ್ ಅವರು OS NO. 26194/2024 ದಾವೆ ಹೂಡಿದ್ದು, ತಾವು ರಕ್ಷಣೆ ಕೋರಿ ತಾವು ನೀಡಿದ ದೂರನ್ನು ಹೆಣ್ಣೂರು ಪೊಲೀಸ್ ಠಾಣೆ ಅಧಿಕಾರಿಗಳು ಸ್ವೀಕರಿಸುತ್ತಿಲ್ಲ. ಅಷ್ಟೇ ಅಲ್ಲ ರೌಡಿಗಳನ್ನು ಸಮರ್ಥಿಸುವ ಪೊಲೀಸರು ನಮ್ಮನ್ನೇ ಬೆದರಿಸಿ ಕಳುಹಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ರೌಡಿಗಳ ಜೊತೆ ಶಾಮೀಲಾಗಿದ್ದಾರೆ ಎಂದು ಸಜಿ ಜೋಸೆಫ್ ನ್ಯಾಯಾಲಯದ ಗಮನಸೆಳೆದಿದ್ದಾರೆ.
ಪ್ರಕರಣದ ಗಂಭೀರತೆ ಅರಿತ ನ್ಯಾಯಾಲಯವು ಪ್ರತಿವಾದಿಗಳಾಗಿರುವ (1).ಬೆಂಗಳೂರು ನಗರ ಪೊಲೀಸ್ ಆಯುಕ್ತರು, (2).ಹೆಣ್ಣೂರು ಪೊಲೀಸ್ ಠಾಣೆಯ ಠಾಣಾಧಿಕಾರಿ, (3).ಹೆಣ್ಣೂರು ಗೋಪಿ, (4).ಸಿನಿ ಸಜಿ, (5).ಜಾನ್ ಡೊ (John Doe) ಅವರ ಖುದ್ದು ಹಾಜರಾಗುವಂತೆ ನ.19ರಂದು ಸಮನ್ಸ್ ಹೊರಡಿಸಿದೆ. 17.12.2024ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಸಮನ್ಸ್ ಹೊರಡಿಸಲಾಗಿದೆ ಎಂದು ದೂರುದಾರರಾದ ಸಜಿ ಜೋಸೆಫ್ ತಿಳಿಸಿದ್ದಾರೆ.