ಬೆಂಗಳೂರು- ವಿಜಯಪುರ ವಂದೇ ಭಾರತ್, ದಿನವಹಿ ವಿಶೇಷ ರೈಲು; ಕೇಂದ್ರಕ್ಕೆ ಸಚಿವ ಎಂ.ಬಿ.ಪಾಟೀಲ್ ಮನವಿ

ಬೆಂಗಳೂರು: ಬೆಂಗಳೂರು-ಮುಂಬೈ ಹೈಸ್ಪೀಡ್ ರೈಲು, ಬೆಂಗಳೂರು- ವಿಜಯಪುರ ವಂದೇ ಭಾರತ್ ರೈಲು ಮತ್ತು ದಿನವಹಿ ವಿಶೇಷ ರೈಲಿಗೆ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಕೇಂದ್ರದ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರೊಂದಿಗೆ ರಾಜ್ಯದ ರೈಲ್ವೆ ಯೋಜನೆಗಳ ಕುರಿತು ಚರ್ಚೆನಡೆಸಿದ ಸಚಿವ ಎಂ.ಬಿ.ಪಾಟೀಲ್, ರಾಜ್ಯ ರಾಜಧಾನಿಯಿಂದ ವಿಜಯಪುರಕ್ಕೆ ವಂದೇ ಭಾರತ್ ಸ್ಲೀಪರ್ ಎಕ್ಸ್‌ಪ್ರೆಸ್ ರೈಲು, ಬೆಂಗಳೂರು-ಮುಂಬೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಮತ್ತು ಬೆಂಗಳೂರು-ವಿಜಯಪುರ ನಡುವೆ ದಿನವಹಿ ವಿಶೇಷ ರೈಲುಗಳನ್ನು ಮಂಜೂರು ಮಾಡಬೇಕೆಂದು ಕೋರಿ ಮನವಿ ಸಲ್ಲಿಸಿದರು.

ಬಾಗಲೂರಿನ ಹೈಟೆಕ್ ಹಾರ್ಡ್ ವೇರ್ ಪಾರ್ಕ್ ನಲ್ಲಿ ಜೆಟ್ ವೆರ್ಕ್ ಸಂಸ್ಥೆಯ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಉತ್ಪಾದನೆಗೆ ಚಾಲನೆ ನೀಡಿದ ಬಳಿಕ ಅಲ್ಲೇ ಕೆಲಹೊತ್ತು ವೈಷ್ಣವ್ ಅವರನ್ನು ಭೇಟಿಮಾಡಿ, ಮನವಿ ಪತ್ರಗಳನ್ನು ನೀಡಿದೆ. ಸಕಾರಾತ್ಮಕವಾಗಿ ಪರಿಶೀಲಿಸುವುದಾಗಿ ರೈಲ್ವೆ ಸಚಿವರು ಭರವಸೆ ನೀಡಿದ್ದಾರೆ ಎಂದು ಎಂ.ಬಿ.ಪಾಟೀಲ್ ಮಾಹಿತಿ ಹಂಚಿಕೊಂಡಿದ್ದಾರೆ.

ಬೆಂಗಳೂರು ದೇಶದ ತಂತ್ರಜ್ಞಾನ ರಾಜಧಾನಿಯಾಗಿದ್ದು, ಮುಂಬಯಿ ಆರ್ಥಿಕ ರಾಜಧಾನಿ ಆಗಿದೆ. ಇವೆರಡೂ ನಗರಗಳನ್ನು ಅತ್ಯುತ್ತಮ ಸಂಪರ್ಕ ವ್ಯವಸ್ಥೆಯಿಂದ ಬೆಸೆಯುವುದು ಅನಿವಾರ್ಯವಾಗಿದೆ. ಈಗಾಗಲೇ ಮುಂಬೈ-ಪುಣೆ ನಡುವೆ ಘೋಷಿಸಿರುವ ಹೈಸ್ಪೀಡ್ ರೈಲು ಕಾರಿಡಾರನ್ನು ಬೆಂಗಳೂರಿನ ತನಕ ವಿಸ್ತರಿಸಬೇಕು ಎಂದು ಮನವಿ ಮಾಡಿದ್ದು, ಇದಕ್ಕೂ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಬೆಂಗಳೂರು-ವಿಜಯಪುರ ನಡುವೆ 530 ಕಿ.ಮೀ. ದೂರವಿದ್ದು, ರೈಲು ಪ್ರಯಾಣಕ್ಕೆ 15-16 ಗಂಟೆ ಹಿಡಿಯುತ್ತಿದೆ. ಇದನ್ನು 10 ಗಂಟೆಗೆ ಇಳಿಸಬೇಕು. ಇದಕ್ಕಾಗಿ ಬೆಂಗಳೂರು-ಹುಬ್ಬಳ್ಳಿ ನಡುವೆ ನಿಯಮಿತ ನಿಲುಗಡೆಗಳನ್ನು ಮಾತ್ರ ಕೊಟ್ಟು, ರೈಲುಗಳನ್ನು ಹುಬ್ಬಳ್ಳಿ, ಗದಗ ಬೈಪಾಸ್ ಮೂಲಕ ಓಡಿಸಬೇಕು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಿಸಬೇಕು ಎಂಬ ಬೇಡಿಕೆಯನ್ನು ಸಹ ರೈಲ್ವೆ ಸಚಿವರ ಮುಂದೆ ಇರಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಇದೇ ರೀತಿಯಲ್ಲಿ ದಿನವಹಿ ಆಧಾರದ ಮೇಲೆ ಇದೇ ಮಾರ್ಗದಲ್ಲಿ ವಿಶೇಷ ರೈಲನ್ನು ಓಡಿಸಬೇಕು. ಈ ಮೂರೂ ಬಗೆಯ ಸೇವೆಗಳಿಂದ ಮಧ್ಯ ಮತ್ತು ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಿಗೆ ಸಾಮಾಜಿಕ, ಕೈಗಾರಿಕಾ ಮತ್ತು ಆರ್ಥಿಕ ಲಾಭವಾಗಲಿದೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿರುವೆ.
ನನ್ನ ಎಲ್ಲ ಮನವಿಗಳಿಗೆ ರೈಲ್ವೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

Related posts