ನವದೆಹಲಿ: ಮಾನಸಿಕ ಸೌಖ್ಯ ಎಂದರೆ ಜೀವನದ ಸವಾಲುಗಳನ್ನು ಎದುರಿಸುವ ಮತ್ತು ಫಲಪ್ರದವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ. ಮಾನಸಿಕ ಯೋಗಕ್ಷೇಮವು ನಮ್ಮ ಎಲ್ಲಾ ಮಾನಸಿಕ-ಭಾವನಾತ್ಮಕ, ಸಾಮಾಜಿಕ, ಅರಿವು ಮತ್ತು ದೈಹಿಕ ಸಾಮರ್ಥ್ಯಗಳನ್ನು ಒಳಗೊಂಡಿದೆ. ಇದನ್ನು ಮನಸ್ಸಿನ ಸಂಯೋಜಿತ ಆರೋಗ್ಯ ಎಂದೂ ಅರ್ಥೈಸಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ಸಂಸತ್ತಿನಲ್ಲಿ ಮಂಡಿಸಿದ 2024-25ರ ಆರ್ಥಿಕ ಸಮೀಕ್ಷೆ ತಿಳಿಸಿದೆ.
ಜೀವನಶೈಲಿಯ ಆಯ್ಕೆಗಳು, ಕಾರ್ಯ ಸ್ಥಳದ ಸಂಸ್ಕೃತಿ ಮತ್ತು ಕೌಟುಂಬಿಕ ಸನ್ನಿವೇಶಗಳು ಉತ್ಪಾದಕತೆಗೆ ನಿರ್ಣಾಯಕವಾಗಿವೆ ಮತ್ತು ಭಾರತದ ಆರ್ಥಿಕ ಮಹತ್ವಾಕಾಂಕ್ಷೆಗಳನ್ನು ಸಾಧಿಸಲು, ಬಾಲ್ಯ/ಯೌವನದಲ್ಲಿ ಮಾಡುವ ಜೀವನಶೈಲಿಯ ಹೆಚ್ಚಿನ ಆಯ್ಕೆಗಳಿಗೆ ತಕ್ಷಣ ಗಮನ ನೀಡಬೇಕು ಎಂದು ಆರ್ಥಿಕ ಸಮೀಕ್ಷೆಯು ವಿವರಿಸುತ್ತದೆ.
ಅಂತರ್ಜಾಲದ ಅತಿಯಾದ ಅವಲಂಬನೆ ವಿಶೇಷವಾಗಿ ಸಾಮಾಜಿಕ ಮಾಧ್ಯಮದ ಅತಿಯಾದ ಬಳಕೆಯ ಕಾರಣದಿಂದ ಮಕ್ಕಳು ಮತ್ತು ಹದಿಹರೆಯದವರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿವೆ ಎಂದು ಆರ್ಥಿಕ ಸಮೀಕ್ಷೆಯು ತಿಳಿಸಿದೆ. ಜೊನಾಥನ್ ಹೈಡ್ಟ್ ಅವರ ‘ದಿ ಆಂಕ್ಷಿಯಸ್ ಜನರೇಷನ್: ಹೌ ದಿ ಗ್ರೇಟ್ ರೀವೈರಿಂಗ್ ಆಫ್ ಚಿಲ್ಡ್ರನ್ ಈಸ್ ಕಾಸಿಂಗ್ ಆನ್ ಎಪಿಡೆಮಿಕ್ ಆಫ್ ಮೆಂಟಲ್ ಇಲ್ನೆಸ್’ (ಚಿಂತಾಗ್ರಸ್ತ ಪೀಳಿಗೆ: ಮರುನಿರೂಪಣೆ ಮಕ್ಕಳ ಮಾನಸಿಕ ಆರೋಗ್ಯದ ಸಾಂಕ್ರಾಮಿಕ) ಎಂಬ ಪುಸ್ತಕವನ್ನು ಉಲ್ಲೇಖಿಸಿ ಸಮೀಕ್ಷೆಯು “ಫೋನ್ ಆಧಾರಿತ ಬಾಲ್ಯ” ದಿಂದಾಗಿ ಬೆಳೆಯುವ ಅನುಭವ ಪುನರ್ವಿನ್ಯಾಸಗೊಳಿಸುತ್ತಿದೆ ಎಂದು ಒತ್ತಿ ಹೇಳಿದೆ.